ತಾಪಮಾನ ತಗ್ಗಿಸಲು ಗಿಡ ಬೆಳೆಸಿ, ಪರಿಸರ ಸಂರಕ್ಷಿಸಿ….ಸೋಮಶೇಖರ ರೂಳಿ
ಬೀದರ: ಇತ್ತೀಚಿನ ದಿನಗಳಲ್ಲಿ ತಾಪಮಾನ 53 ಡಿಗ್ರಿಗಳಿಗೆ ಮುಟ್ಟಿ, ಬಿಸಿಲಾಘಾತ ಹಾಗೂ ಸೂರ್ಯಾಘಾತ ದಿಂದ ಉತ್ತರ ಭಾರತದಲ್ಲಿ ಅನೇಕ ಸಾವು ನೋವು ಗಳು ಸಂಭವಿಸುತ್ತಿವೆ. ನಮ್ಮಲ್ಲಿಯೂ ತಾಪಮಾನವು 43 ಡಿಗ್ರಿಗೆ ತಲುಪಿದೆ. ಇದು ಹೀಗೆಯೇ ಬೆಳೆಯುತ್ತ ಹೋದರೆ ಮುಂದಿನ ದಿನಗಳಲ್ಲಿ, ಜನರು ಭಾರಿ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ತಾಪಮಾನವನ್ನು ತಗ್ಗಿಸಬೇಕಾದರೆ, ಸಸಿಗಳನ್ನು ನೆಟ್ಟು ಅವುಗಳನ್ನು ಪಾಲನೆ ಪೋಷಣೆ ಮಾಡಬೇಕು ಎಂದು ಆಕಾಶವಾಣಿ ಕಲಬುರ್ಗಿ ಕೇಂದ್ರದ ಕಾರ್ಯಕ್ರಮ ಅಧಿಕಾರಿಗಳಾದ ಸೋಮಶೇಖರ ರೂಳಿಯವರು ಅಭಿಪ್ರಾಯಪಟ್ಟರು.
ಅವರು ಅಖಿಲ ಭಾರತ ವಿಶ್ವವಿದ್ಯಾಲಯಗಳ ನೌಕರರ ಒಕ್ಕೂಟದಿಂದ ಕಲಬುರಗಿ ಆಕಾಶವಾಣಿ ಕೇಂದ್ರದಲ್ಲಿ ಏರ್ಪಡಿಸಿದ್ದ, ಪರಿಸರ ಜಾಗೃತಿ ಹಾಗೂ ಸಸಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಪರಿಸ್ಥಿತಿ ಕೈ ಮೀರುವ ಮುನ್ನ ನಾವೆಲ್ಲರೂ ಎಚ್ಚೆತ್ತು ಕೊಳ್ಳಬೇಕೆಂದು ಮನವಿ ಮಾಡಿದರು. ನಮ್ಮ ನಮ್ಮ ಮನೆಗಳ ಆವರಣದಲ್ಲಿ ಇರುವ ಗಿಡಗಳನ್ನೆಲ್ಲ ಜೋಪಾನ ಮಾಡಿ, ಅವುಗಳು ನಾಶವಾಗದ ಹಾಗೆ ನೋಡಿಕೊಳ್ಳಬೇಕೆಂದು ಕರ್ನಾಟಕ ಪಶುವೈದ್ಯಕೀಯ ವಿಶ್ವವಿದ್ಯಾಲಯದ ನಿವೃತ್ತ ಉಪ ಹಣಕಾಸು ಅಧಿಕಾರಿ ವೀರಭದ್ರಪ್ಪ ಉಪ್ಪಿನ ರವರು ಅಭಿಪ್ರಾಯಪಟ್ಟರು. ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಅರವಿಂದ ಕುಲಕರ್ಣಿ ಯವರು ಮಾತನಾಡಿ, ಸಸಿ ನೆಡುವ ಕಾರ್ಯಕ್ರಮವನ್ನು ಆಂದೋಲನದ ರೂಪದಲ್ಲಿ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಸಂತೋಷಿ ಕುಮಾರಿ, ಸಾಗರ ಬಿರಾದಾರ, ಮಧು ದೇಶಮುಖ, ಸಂಗಮೇಶ ಮುಂತಾದವರು ಹಾಜರಿದ್ದರು.