ತಹಸೀಲ್ದಾರ್ ಕಚೇರಿ ಸಿಬ್ಬಂದಿ ಮೇಲೆ ಚಾಕು ಇರಿತ ಅರೋಪಿಗಳ ಬಂಧನ : ನಗರದಲ್ಲಿ ಎಸ್ ಪಿ ಪ್ರದೀಪ್ ಗುಂಟಿ ಮಾಹಿತಿ
ಬೀದರ್ ನಗರದ ತಹಶೀಲ್ದಾರ್ ಕಚೇರಿಯಲ್ಲಿ ಆಹಾರ ವಿಭಾಗದ ಶಿರಸ್ತೆದಾರನಿಗೆ ಚಾಕು ಇರಿದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.ಘಟನೆಗೆ ಸಂಬಂಧಿಸಿದ ಆರೋಪಿಗಳಾದ ಎಂ.ಡಿ.ಅಮನ್, ಮೊಹಮ್ಮದ್ ಜಿಶಾನ್ ಇಬ್ಬರು ಸಹೋದರರನ್ನು ಘಟನೆ ನಡೆದ ನಾಲ್ಕು ಗಂಟೆಗಳಲ್ಲೇ ಪೊಲೀಸರು ಬಂದಿಸಿದ್ದಾರೆ.ಚಾಕು ಇರಿತಕ್ಕೊಳಗಾದ ಶಿರಸ್ತೆದಾರ್ ಅನಿಲಕುಮಾರ್ ಕಾಂಬಳೆ ಅವರನ್ನು ಬ್ರಿಮ್ಸ್ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ʼತಹಶೀಲ್ದಾರ್ ಕಚೇರಿಯ ಆಹಾರ ವಿಭಾಗದಲ್ಲಿ ಅನಿಲಕುಮಾರ್ ಕಾಂಬಳೆ ಅವರೊಂದಿಗೆ ಬಂಧಿತ ಎಂ.ಡಿ.ಅಮನ್ ಅವರ ಪತ್ನಿ ಕೆಲಸ ನಿರ್ವಹಿಸುತ್ತಾರೆ. ಪತ್ನಿಯೊಂದಿಗೆ ಅನಿಲಕುಮಾರ್ ಆತ್ಮೀಯರಾಗಿದ್ದಾರೆ ಎಂಬ ಅನುಮಾನದಿಂದ ಅನಿಲಕುಮಾರ್ ಅವರನ್ನು ಕೊಲೆ ಮಾಡುವ ಉದ್ದೇಶದಿಂದ ಆತನ ಸಹೋದರ ಮೊಹಮ್ಮದ್ ಜಿಶಾನ್ ಅವರೊಂದಿಗೆ ಕಚೇರಿಯೊಳಗೆ ಹೋಗಿ ಜಾತಿ ನಿಂದನೆ ಮಾಡಿ, ಚಾಕುವಿನಿಂದ ಎಡಗೈ ರಟ್ಟೆಗೆ ಇರಿದು ಮಾರಣಾಂತಿಕ ಹಲ್ಲೆ ಮಾಡಿದ್ದಾರೆʼ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ತಿಳಿಸಿದ್ದಾರೆ.ಸ್ಥಳಕ್ಕೆ ಮಾರ್ಕೆಟ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಘಟನೆ ನಡೆದ ನಾಲ್ಕು ಗಂಟೆಗಳ ಒಳಗೆ ಇಬ್ಬರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆʼ ಎಂದು ಮಾಹಿತಿ ನೀಡಿದರು.ಈ ಕುರಿತು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.