ಬೀದರ್

ಡಿಸೆಂಬರ್ 6ರಿಂದ ಮೂರು ದಿನಗಳ ಕಾಲ “ಬಿದರಿ ಉತ್ಸವ – 2024”

ಬೀದರ್ ಪೂಜ್ಯ ಪಟ್ಟದ್ದೇವರು ರಂಗಮಂದಿರ, ನೆಹರು ಕ್ರೀಡಾಂಗಣದಲ್ಲಿ ಉತ್ಸವಬಿದರಿ ವೇದಿಕೆಯ ರಾಜ್ಯ ಮಟ್ಟದ ಬಿದರಿ ದತ್ತಿ ಪ್ರಶಸ್ತಿಗೆ ಶೀಘ್ರ ಹೆಸರು ಘೋಷಣೆಸಂಗೀತ ಸಂಜೆ, ಹರಟೆ, ಹಾಸ್ಯ, ಜಾದೂ, ಕ್ರೀಡಾಕೂಟ ಆಯೋಜನೆಗೆ ನಿರ್ಧಾರ

ಬೀದರ್ ಇಲ್ಲಿನ “ಬಿದರಿ, ಬೀದರ್ ಜಿಲ್ಲೆಯ ಸಾಂಸ್ಕೃತಿಕ ವೇದಿಕೆ”ಯು ರಾಜ್ಯ ಮಟ್ಟದ ಬಿದರಿ ಉತ್ಸವ- 2024 ನ್ನು ಬರುವ ಡಿಸೆಂಬರ್ 6ರಿಂದ 8ರ ವರೆಗೆ ಮೂರು ದಿನಗಳ ಕಾಲ ಆಯೋಜಿಸಲು ನಿರ್ಧರಿಸಿತು.

ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷರಾದ ಹಿರಿಯ ಸಾಹಿತಿ ಭಾರತಿ ವಸ್ತ್ರದ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಣಯ ಕೈಗೊಂಡಿದ್ದು ಮೂರು ದಿನಗಳ ಕಾಲ ವೈವಿಧ್ಯಮಯ ಕಾರ್ಯಕ್ರಮ, ಕ್ರೀಡೆಗಳನ್ನು ಆಯೋಜಿಸಲು ತೀರ್ಮಾನಿಸಲಾಯಿತು.

ಬಿದರಿ ಉತ್ಸವದಲ್ಲಿ ಹರಟೆ ಕಾರ್ಯಕ್ರಮ, ಚಿಕ್ಕಮಕ್ಕಳಿಗೆ ಗಾಯನ ಸ್ಪರ್ಧೆ, ಹಾಸ್ಯ ಸಂಜೆ ಕಾರ್ಯಕ್ರಮ, ಬೀದರ್ ಜಿಲ್ಲೆಯ ಸಂಗೀತ ಸಾಧಕರ ವಿವರಗಳುಳ್ಳ ಕಿರು ಹೊತ್ತಿಗೆ ಬಿಡುಗಡೆ, ಜಾದೂ, ವಿವಿಧ ಕ್ರೀಡೆಗಳ ಆಯೋಜನೆಗೆ ಸಲಹೆಗಳು ವ್ಯಕ್ತವಾದವು. ಈ ವಿಷಯಗಳಿಗನುಗುಣವಾಗಿ ಸಮಿತಿಗಳನ್ನು ರಚಿಸಿ ಕಾರ್ಯಗತಗೊಳಿಸೋಣ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

ವೇದಿಕೆಯ ಅಧ್ಯಕ್ಷೆ ರೇಖಾ ಸೌದಿ ಮಾತನಾಡಿ, ‘ಬಿದರಿ’, ಬೀದರ್ ಜಿಲ್ಲೆಯ ಸಾಂಸ್ಕೃತಿಕ ವೇದಿಕೆಯು ಇದೀಗ ಐದು ವರ್ಷ ಪೂರೈಸಿ ಆರನೇ ವರ್ಷಕ್ಕೆ ಕಾಲಿಡುತ್ತಿದ್ದು ಬಿದರಿ ಉತ್ಸವಕ್ಕಾಗಿ ಈಗಾಗಲೇ ಪೂಜ್ಯ ಡಾ. ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರ ಹಾಗೂ ನೆಹರು ಕ್ರೀಡಾಂಗಣವನ್ನು ಕಾಯ್ದಿರಿಸಲು ನಿರ್ಧರಿಸಲಾಗಿದೆ, ಬಿದರಿ ಉತ್ಸವ ಯಶಸ್ವಿಗೆ ಎಂದಿನಂತೆ ಎಲ್ಲರ ಸಹಕಾರ ಅಗತ್ಯವಿದೆ ಎಂದರು.

ಬಿದರಿ ವೇದಿಕೆಯ “ರಾಜ್ಯ ಮಟ್ಟದ ಬಿದರಿ ದತ್ತಿ ಪ್ರಶಸ್ತಿ”ಗೆ ಶೀಘ್ರ ಹೆಸರು ಪ್ರಕಟ :

‘ಬಿದರಿ’ ಸಾಂಸ್ಕೃತಿಕ ವೇದಿಕೆಯ 2021ನೇ ಸಾಲಿನ ರಾಜ್ಯ ಮಟ್ಟದ ’ಬಿದರಿ ದತ್ತಿ ಪ್ರಶಸ್ತಿ’ಯನ್ನು ಖ್ಯಾತ ಸಂಗೀತ ವಿದ್ವಾನ್ ಪಂ.ವೈಕುಂಠ ದತ್ತ ಮಹಾರಾಜ್ ಅವರಿಗೆ, 2022ರ ಪ್ರಶಸ್ತಿಯನ್ನು ವಿಶ್ವ ವಿಖ್ಯಾತ ಕ್ಲಾರಿಯೋನೇಟ್ ವಾದಕರಾದ ರಾಯಚೂರು ಜಿಲ್ಲೆ ಮೂಲದ ನರಸಿಂಹಲು ವಡವಾಟಿ ಅವರಿಗೆ, 2023ನೇ ಸಾಲಿನ ಪ್ರಶಸ್ತಿಯನ್ನು ಖ್ಯಾತ ಹಿನ್ನೆಲೆ ಗಾಯಕಿ ಲತಾ ಹಂಸಲೇಖಾ ಅವರಿಗೆ ಕೊಡಮಾಡಲಾಗಿದ್ದು 2024ನೇ ಸಾಲಿನ ಪ್ರಶಸ್ತಿಯನ್ನು ಶೀಘ್ರದಲ್ಲಿ ಪ್ರಕಟಿಸಲಾಗುವದು ಎಂದು ಬಿದರಿ ವೇದಿಕೆಯ ಅಧ್ಯಕ್ಷೆ ರೇಖಾ ಸೌದಿ ತಿಳಿಸಿದರು.

ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ ಸಿದ್ದತೆಗಳ ಪಟ್ಟಿ ಮಾಡಿದರು, ಬಿದರಿ ವೇದಿಕೆಯ ಹಿತೈಶಿಗಳಾದ ಬಾಬು ವಾಲಿ, ಮಂಗಲಾ ಭಾಗವತ್, ಮುನೇಶ್ವರ ಲಾಖಾ, ಸುಬ್ಬಣ್ಣ ಕರಕನಳ್ಳಿ, ರತೀನ್ ಕಮಲ್, ಮಾರುತಿ ಕಂಠಿ, ರೇವಣಸಿದ್ದಪ್ಪ ಡೊಂಗರಗಾಂವ್. ರಾಜೇಂದ್ರಕುಮಾರ ಮಣಗೆ, ಶಶಿಧರ ಭಾಸನ್, ಶಿಖರೇಶ್ವರ ಪಾಟೀಲ್, ಶಿವಕುಮಾರ ಕೋತ್ಮಿರ್, ಮುಕ್ರಂ ಖಾನ್, ಪತ್ರಕರ್ತರಾದ ಪೃಥ್ವಿರಾಜ್ ಹಾಗೂ ಅಪ್ಪಾರಾವ್ ಸೌದಿ ಸೇರಿದಂತೆ ಮತ್ತಿತರರು ಇದ್ದರು. ಇದೇ ಸಂದರ್ಭದಲ್ಲಿ ಬಿದರಿ ಸಂಸ್ಥೆಯ ಸಕ್ರೀಯ ಸದಸ್ಯರಾಗಿದ್ದು ಅಕಾಲಿಕ ನಿಧನ ಹೊಂದಿದ ಯುವ ಗಾಯಕ ವಿಷ್ಣು ಜನವಾಡಕರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಒಂದು ನಿಮಿಷದ ಮೌನಾಚರಣೆ ನಡೆಸಲಾಯಿತು.

Ghantepatrike kannada daily news Paper

Leave a Reply

error: Content is protected !!