ಬೀದರ್

ಡಿಎಸ್‍ಎಸ್ ಹಿರಿಯ ಮುಖಂಡ ರಮೇಶ ಡಾಕುಳಗಿ ಮಾಹಿತಿ *ಸಮಾವೇಶದ ಪೋಸ್ಟರ್ ಬಿಡುಗಡೆ

ಬೀದರ್:ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‍ವಾದ) ವತಿಯಿಂದ ಜೂ.26ರಂದು ಬೆಳಗ್ಗೆ 11.30ಕ್ಕೆ ಹುಮನಾಬಾದ್ ಪಟ್ಟಣದ ಟೀಚರ್ ಕಾಲೋನಿಯ ಡಾ. ಅಂಬೇಡ್ಕರ್ ಭವನದಲ್ಲಿ ಸಮಾನತೆಗಾಗಿ ಸಂಘರ್ಷ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಬೃಹತ್ ಸಮಾವೇಶ ಆಯೋಜಿಸಲಾಗಿದೆ ಎಂದು ಸಮಿತಿ ಹಿರಿಯ ಮುಖಂಡ, ಹುಮನಾಬಾದ್ ತಾಪಂ ಮಾಜಿ ಅಧ್ಯಕ್ಷ ರಮೇಶ ಡಾಕುಳಗಿ ಹೇಳಿದ್ದಾರೆ.
ನಗರದ ಡಾ.ಅಂಬೇಡ್ಕರ್ ವೃತ್ತದ ಹತ್ತಿರ ಮಂಗಳವಾರ ಸಮಾವೇಶದ ಪ್ರಚಾರ ಕುರಿತ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಮೀಸಲಾತಿ ಜನಕರಾದ ಛತ್ರಪತಿ ಶಾಹು ಮಹಾರಾಜ, ನಾಲ್ವಡಿ ಕೃಷ್ಣರಾಜ ಒಡೆಯರ್, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಸ್ಥಾಪಕರು, ದಲಿತ ಚಳವಳಿಯ ಮಹಾಚೇತನರಾದ ದಿ. ಪ್ರೊ.ಬಿ.ಕೃಷ್ಣಪ್ಪ ಅವರ ಜನ್ಮ ದಿನಾಚರಣೆ ಹಾಗೂ ಶ್ರೇಷ್ಠ ಚಿಂತಕರಾಗಿದ್ದ ದಿ.ಡಾ.ಸಿದ್ಧಲಿಂಗಯ್ಯ ಅವರ ಮಹಾ ಪರಿನಿರ್ವಾಣ ದಿನಾಚರಣೆ ಏಕಕಾಲಕ್ಕೆ ಸಂಘಟಿಸಲಾಗಿದೆ. ಇದನ್ನು ಸಮಾನತೆಗಾಗಿ ಸಂಘರ್ಷ ದಿನಾಚರಣೆಯೊಂದಿಗೆ ಜಿಲ್ಲಾಮಟ್ಟದ ಸಮಾವೇಶವನ್ನಾಗಿ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಛತ್ರಪತಿ ಶಾಹು ಮಹಾರಾಜರ 150ನೇ ಜನ್ಮ ದಿನವಿದೆ. ಶಾಹು ಮಹಾರಾಜರು ಉದ್ಯೋಗದಲ್ಲಿ ಶೇ. 50 ಮೀಸಲಾತಿ ಕಲ್ಪಿಸಿದ್ದರು. ಎಸ್‍ಸಿ/ಎಸ್‍ಟಿ ಪ್ರತಿಬಂಧಕ ಕಾಯ್ದೆ ಜಾರಿಗೊಳಿಸಿದ್ದರು. ಗಂಗಾರಾಮ ಕಾಂಬಳೆ ಎಂಬ ದಲಿತನಿಗೆ ಅರಮನೆಯಲ್ಲಿ ಕರೆಸಿ ಹೋಟೆಲ್ ಹಾಕಿಸಿ ಅಸ್ಪ್ರಶ್ಯತೆ ನಿವಾರಿಸಲು ಪ್ರಯತ್ನಿಸಿದ್ದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 140ನೇ ಜನ್ಮ ದಿನವಿದೆ. ಒಡೆಯರ್ ಅವರು 1918 ಮಿಲ್ಲರ್ ಸಮಿತಿ ರಚಿಸಿ ರಾಜ್ಯದಲ್ಲಿ ಸರ್ವೆ ಮಾಡಿಸಿ, 1921ರಲ್ಲಿ ಶೇ.25 ಮೀಸಲಾತಿ ಕೊಟ್ಟಿದ್ದರು. ಸ್ವಾತಂತ್ರ್ಯಕ್ಕೂ ಮುನ್ನವೇ ಈ ಇಬ್ಬರೂ ರಾಜರು ದಲಿತರು, ಶೋಷಿತರ ಬಗ್ಗೆ ಅಪಾರ ಕಾಳಜಿ ವಹಿಸಿ ಏಳ್ಗೆಗೆ ಶ್ರಮಿಸಿದ್ದರು. ಹೀಗಾಗಿ ಅವರ ಜನ್ಮ ದಿನವನ್ನು ಆಚರಿಸಿ ಗೌರವ ನಮನ ಸಲ್ಲಿಸಲಾಗುವುದು ಎಂದು ಹೇಳಿದರು.
ಪ್ರೊ. ಬಿ.ಕೃಷ್ಣಪ್ಪ ಅವರ 86ನೇ ಜನ್ಮ ದಿನ ಆಚರಿಸಲಾಗುತ್ತಿದೆ. ಪ್ರೊ.ಕೃಷ್ಣಪ್ಪ ಅವರು ಕರ್ನಾಟಕದಲ್ಲಿ ದಲಿತ ಸಂಘರ್ಷ ಸಮಿತಿಯನ್ನು ಸ್ಥಾಪಿಸಿ ಈಗ 50 ವರ್ಷವಾಗಿದೆ. ರಾಜ್ಯದಲ್ಲಿ ದಲಿತ ಚಳವಳಿಗೆ ಹೊಸ ದಿಕ್ಕು ನೀಡಿದ್ದ ಅಪ್ರತಿಮ ಹೋರಾಟಗಾರರಾಗಿದ್ದರು. ದಲಿತ ಚಳವಳಿ, ದಲಿತ ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆ ನೀಡಿದ್ದ ಧೀಮಂತ ಚೇತನರಲ್ಲಿ ಡಾ.ಸಿದ್ದಲಿಂಗಯ್ಯ ಪ್ರಮುಖರು. ಅವರ 3ನೇ ಮಹಾ ಪರಿನಿರ್ವಾಣ ದಿನ ಆಚರಿಸಲಾಗುತ್ತಿದೆ. ಎಲ್ಲ ಮಹನೀಯರ ಅಪಾರ ಸೇವೆ, ಸಮಾಜಕ್ಕೆ ಕೊಟ್ಟ ಅವಿಸ್ಮರಣೀಯ ಕೊಡುಗೆ ಕುರಿತು ಸಮಾವೇಶದಲ್ಲಿ ಚಿಂತನ-ಮಂಥನ ನಡೆಯಲಿದೆ. ಅನೇಕ ಚಿಂತಕರು, ಗಣ್ಯರು, ಸಾಹಿತಿಗಳು, ಹೋರಾಟಗಾರರು ಪಾಲ್ಗೊಳ್ಳಲಿದ್ದಾರೆ ಎಂದರು.
ಪ್ರೊ.ಬಿ.ಕೃಷ್ಣಪ್ಪ ಟ್ರಸ್ಟ್ ಅಧ್ಯಕ್ಷೆ ಇಂದಿರಾ ಕೃಷ್ಣಪ್ಪ ಸಮಾವೇಶ ಉದ್ಘಾಟಿಸುವರು. ಮಾಜಿ ಸಚಿವ ರಾಜಶೇಖರ ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲ್, ಭೀಮರಾವ ಪಾಟೀಲ್, ದಲಿತ ಸಂಘರ್ಷ ಸಮಿತಿ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್, ಜೋಶಿ ಮೀಡಿಯಾ ಹೌಸ್ ಮುಖ್ಯಸ್ಥರಾದ ಹಿರಿಯ ಪತ್ರಕರ್ತ ಸದಾನಂದ ಜೋಶಿ, ಪ್ರಮುಖರಾದ ರುದ್ರಪ್ಪ ಹನಗವಾಡಿ, ಡಾ.ಅಪ್ಪಗೆರೆ ಸೋಮಶೇಖರ್, ಡಾ.ಜಯದೇವಿ ಗಾಯಕವಾಡ, ಡಾ.ಪ್ರಕಾಶ ಪಾಟೀಲ್ ಇತರರು ಅತಿಥಿಗಳಾಗಿ ಉಪಸ್ಥಿತರಿರುವರು. ಜಿಲ್ಲೆಯ ಎಲ್ಲ ಕಡೆಯಿಂದ ಎರಡು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸುವರು. ಸಮಾವೇಶಕ್ಕೆ ವ್ಯಾಪಕ ಸಿದ್ಧತೆ ನಡೆದಿದೆ ಎಂದು ಹೇಳಿದರು.
ಪ್ರಮುಖರಾದ ರಾಜಕುಮಾರ ಬನ್ನೇರ್, ರಂಜೀತಾ ಜೈನೂರೆ, ಬಸವರಾಜ ಸಾಗರ್, ಝರೆಪ್ಪ ರಾಂಪುರೆ, ಸುಧಾಕರ ಮಾಳಗೆ, ರಮೇಶ ಮಂದಕನಳ್ಳಿ, ಮಹಾದೇವ ಗಾಯಕವಾಡ, ಘಾಳೆಪ್ಪ ಮೈಲೂರೆ, ರವಿ ಗೌಂಡಿ, ಕೈಲಾಸ ಮೇಟಿ, ಮಾಣಿಕ ಮಾಡಗೂಳೆ, ಮಾರುತಿ ಜಗದಾಳೆ, ವಿಠಲ್ ಲಾಡಕರ್, ತುಕಾರಾಮ ಲಾಡಕರ್ ಇತರರಿದ್ದರು.

Ghantepatrike kannada daily news Paper

Leave a Reply

error: Content is protected !!