ಬೀದರ್

ಡಾ. ಚಂದ್ರಶೇಖರ ಪಾಟೀಲ ಅವರು 4,651 ಮತಗಳ ಅಂತರದಿಂದ ಗೆಲುವು

ಕಲಬುರಗಿ,ಜೂ.7: ಕರ್ನಾಟಕ‌ ವಿಧಾನ ಪರಿಷತ್ತಿಗೆ ಆಯ್ಕೆಗೆ ಈಶಾನ್ಯ ಕರ್ನಾಟಕ ಪದವೀಧರ ಚುನಾವಣೆಯ ಮತ ಎಣಿಕೆ ಫಲಿತಾಂಶ ಶುಕ್ರವಾರ ಹೊರಬಿದ್ದಿದ್ದು, ಎರಡನೇ ಪ್ರಾಶಸ್ತ್ಯ ಮತ ಎಣಿಕೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ. ಚಂದ್ರಶೇಖರ ಪಾಟೀಲ ಅವರು 4,651 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಕಲಬುರಗಿ ನಗರದ ಗುಲಬರ್ಗಾ ವಿ.ವಿ.ಯ ಸಾದ್ವಿ ಶಿರೋಮಣಿ ಸಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅಧ್ಯಯನ ಪೀಠ ಮತ್ತು ಸಂಶೋಧನಾ ಕೇಂದ್ರದಲ್ಲಿ ಗುರುವಾರ ಬೆಳಿಗ್ಗೆ 8 ಗಂಟೆಯಿಂದ ಆರಂಭವಾದ ಮತ ಎಣಿಕೆ ಕಾರ್ಯ ಶುಕ್ರವಾರ ಬೆಳಿಗ್ಗೆ 11 ಗಂಟೆ ವರೆಗೂ ನಿರಂತರವಾಗಿ ನಡೆಯಿತು. ಕೊನೆಯದಾಗಿ ಎರಡನೇ ಪ್ರಾಶಸ್ತ್ಯ ಮತ ಎಣಿಕೆ ನಂತರ ವಿನ್ನಿಂಗ್ ಕೋಟಾ ತಲುಪದಿದ್ದರೂ ಕೊನೆಯ ಇಬ್ಬರು ಸ್ಪರ್ಧಿಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್ಚಿನ ಮತ ಪಡೆದ ಕಾರಣ ಚುನಾವಣಾಧಿಕಾರಿ ಕೃಷ್ಣ ಭಾಜಪೇಯಿ ಅವರು ಡಾ. ಚಂದ್ರಶೇಖರ ಪಾಟೀಲ ಅವರಿಗೆ ಗೆಲುವಿನ ಪ್ರಮಾಣ ಪತ್ರ‌ ವಿತರಿಸುವ ಮೂಲಕ ಅಧಿಕೃತವಾಗಿ ಫಲಿತಾಂಶವನ್ನು ಘೋಷಿಸಿದರು

ಇದಕ್ಕು ಮುನ್ನ‌ ನಡೆದ ಪ್ರಥಮ ಪ್ರಾಶಸ್ತ್ಯ ಮತ ಎಣಿಕೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಭ್ಯರ್ಥಿ ಡಾ.ಚಂದ್ರಶೇಖರ ಪಾಟೀಲ-39,496, ಬಿ.ಜೆ.ಪಿ ಅಭ್ಯರ್ಥಿ ಅಮರನಾಥ ಪಾಟೀಲ-35,050, ಸ್ವತಂತ್ರ ಅಭ್ಯರ್ಥಿಗಳಾದ ಎನ್.ಪ್ರತಾಪ ರೆಡ್ಡಿ-17,421, ಅನಿಮೇಶ್ ಮಹಾರುದ್ರಪ್ಪ ಅಂದವಾಡೆ-111, ಅಬ್ದುಲ್ ಜಬ್ಬಾರ ಗೋಳಾ-201, ಕಾಶಿನಾಥ ಎಂ. ಗಿಲೇರಿ-276, ಬಸವರಾಜ ಮ್ಯಾಗಲಮನಿ-59, ಮಹೆಬೂಬ್ ಮೊಹಮ್ಮದ್ ಖಾಜಾ ಹುಸೇನ್ ವಂಟೇಲಿ-57, ಎಂ.ಜಾವಿದ್ ಹುಸೇನ್-194, ರಿಯಾಜ್ ಅಹ್ಮದ-74, ವಿಲಾಸ‌ ಎಂ. ಕಣಮಸ್ಕರ್-817, ಶರಣಬಸಪ್ಪ ಪಿ. ಸುಗೂರ-1,392, ಎ.ಶರಣ ಐ.ಟಿ-73, ಎ.ಎಸ್.ನಾಗನಹಳ್ಳಿ-17, ಶಿವಕುಮಾರ ಹಿರೇಮಠ-167, ಸತೀಣಕುಮಾರ ಕೋಬಾಳಕರ್-792, ಸಾಯಿನಾಥ ನಾಗೇಶ್ವರ ಮೇದಾ-72, ಡಾ.ಸುನೀಲಕುಮಾರ ಎಚ್. ವಂಟಿ-116 ಹಾಗೂ ಸುರೇಶ ದವಿದಪ್ಪ-133 ಮತಗಳು ಪಡೆದರು. ಇದರಲ್ಲಿ ಚಲಾವಣೆಯಾದ 1,09,031 ಮತಗಳ ಪೈಕಿ 96,518 ಮತ ಪುರಸ್ಕೃತವಾದರೆ 12,513 ಮತಗಳು ತಿರಸ್ಕೃತವಾದವು.

ಪ್ರಥಮ ಪ್ರಾಶಸ್ತ್ಯ ಮತ ಎಣಿಕೆ ನಂತರ ಚಲಾವಣೆಯಾದ 1,09,031 ಮತಗಳ ಪೈಕಿ 96,518 ಮತ ಪುರಸ್ಕೃತಗೊಂಡ ಹಿನ್ನೆಲೆಯಲ್ಲಿ ಪುರಸ್ಕೃತ ಮತದಲ್ಲಿ ಶೇ.50+1 ಮತ ಅಂದರೆ 48,260 ಮತ ವಿನ್ನಿಂಗ್ ಕೋಟಾ ನಿಗದಿ ಮಾಡಿ ಚುನಾವಣಾಧಿಕಾರಿ ಕೃಷ್ಣ ಭಾಜಪೇಯಿ ಅವರು ಘೋಷಿಸಿದರು.

ತದನಂತರ ನಡೆದ ಎರಡನೇ ಪ್ರಾಶಸ್ತ್ಯ ಮತ‌ ಎಣಿಕೆಯಲ್ಲಿ ಪ್ರಥಮ ಪ್ರಾಶಸ್ತ್ಯ ಮತದಲ್ಲಿ ಅತ್ಯಂತ ಕಡಿಮೆ ಮತ ಪಡೆದ ಸ್ವತಂತ್ರ ಅಭ್ಯರ್ಥಿಗಳಾದ‌ ಎ.ಎಸ್.ನಾಗನಹಳ್ಳಿ ರಿಂದ ಹಿಡಿದು ಎನ್.ಪ್ರತಾಪ ರೆಡ್ಡಿ ವರೆಗೆ 17 ಅಭ್ಯರ್ಥಿಗಳನ್ನು ಹಂತ-ಹಂತವಾಗಿ ಸ್ಪರ್ಧೆಯಿಂದ ಎಲಿಮಿನೇಟ್ ಮಾಡಿ ಅವರಿಗೆ ನೀಡಲಾದ ಮತದಲ್ಲಿನ ಎರಡನೇ ಪ್ರಾಶಸ್ತ್ಯ ಮತಗಳನ್ನು ಮೇಲಿನ ಅಭ್ಯರ್ಥಿಗಳ ಲೆಕ್ಕಕ್ಕೆ ತೆಗೆದುಕೊಳ್ಳಲಾಯಿತು. ಹೀಗೆ ಎರಡನೇ ಪ್ರಾಶಸ್ತ್ಯ ಮತ ಎಣಿಕೆ ಮುಕ್ತಾಯದ ನಂತರ ಕಾಂಗ್ರೆಸ್ ಅಭ್ಯರ್ಥಿ ಡಾ.ಚಂದ್ರಶೇಖರ ಪಾಟೀಲ ಅವರು 3,988 ಮತ್ತು ಬಿ.ಜೆ.ಪಿ. ಅಭ್ಯರ್ಥಿ ಅಮರನಾಥ ಪಾಟೀಲ ಅವರು 3,783 ಎರಡನೇ ಪ್ರಾಶಸ್ತ್ಯದ ಮತಗಳನ್ನು ಪಡೆದರೆ, 14,201 ಮತಗಳು ಎಕ್ಸಾಸ್ಟ್ (Exhaust) ಗೊಂಡವು. ಪ್ರಥಮ ಪ್ರಾಶಸ್ತ್ಯ ಮತದಲ್ಲಿ ಅರಂಭಿಕ ಎರಡು ಸುತ್ತು ಹೊರತುಪಡಿಸಿ ಉಳಿದ 6 ಸುತ್ತುಗಳಲ್ಲಿ ಮುನ್ನಡೆ ಸಾಧಿಸಿದ ಡಾ.ಚಂದ್ರಶೇಖರ ಪಾಟೀಲ ಎರಡನೇ ಪ್ರಾಶಸ್ತ್ಯ ಮತದಲ್ಲು 205 ಮತಗಳನ್ನು ಲೀಡ್ ಪಡೆದುಕೊಂಡರು.

ಅಂತಿಮವಾಗಿ ಎರಡನೇ ಪ್ರಾಶಸ್ತ್ಯ ಮತ ಎಣಿಕೆ ನಂತರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಭ್ಯರ್ಥಿ ಡಾ.ಚಂದ್ರಶೇಖರ ಪಾಟೀಲ-43,484 ಮತಗಳನ್ನು ಪಡೆದು, 4,651 ಮತಗಳಿಂದ ಗೆಲುವಿನ ನಗೆ ಬೀರಿದರು. ಬಿ.ಜೆ.ಪಿ ಅಭ್ಯರ್ಥಿ ಅಮರನಾಥ ಪಾಟೀಲ-38,833, ಸ್ವತಂತ್ರ ಅಭ್ಯರ್ಥಿಗಳಾದ ಎನ್.ಪ್ರತಾಪ ರೆಡ್ಡಿ-17,651, ಅನಿಮೇಶ್ ಮಹಾರುದ್ರಪ್ಪ ಅಂದವಾಡೆ-113, ಅಬ್ದುಲ್ ಜಬ್ಬಾರ ಗೋಳಾ-243, ಕಾಶಿನಾಥ ಎಂ. ಗಿಲೇರಿ-295, ಬಸವರಾಜ ಮ್ಯಾಗಲಮನಿ-59, ಮಹೆಬೂಬ್ ಮೊಹಮ್ಮದ್ ಖಾಜಾ ಹುಸೇನ್ ವಂಟೇಲಿ-57, ಎಂ.ಜಾವಿದ್ ಹುಸೇನ್-212, ರಿಯಾಜ್ ಅಹ್ಮದ-75, ವಿಲಾಸ‌ ಎಂ. ಕಣಮಸ್ಕರ್-914, ಶರಣಬಸಪ್ಪ ಪಿ. ಸುಗೂರ-1,796, ಎ.ಶರಣ ಐ.ಟಿ-73, ಎ.ಎಸ್.ನಾಗನಹಳ್ಳಿ-17, ಶಿವಕುಮಾರ ಹಿರೇಮಠ-177, ಸತೀಷಕುಮಾರ ಕೋಬಾಳಕರ್-809, ಸಾಯಿನಾಥ ನಾಗೇಶ್ವರ ಮೇದಾ-72, ಡಾ.ಸುನೀಲಕುಮಾರ ಎಚ್. ವಂಟಿ-120 ಹಾಗೂ ಸುರೇಶ ದವಿದಪ್ಪ-135 ಮತಗಳು ಪಡೆದರು.

ಸುದೀರ್ಘ 27 ಗಂಟೆ ಎಣಿಕೆ ಕಾರ್ಯ:

ಗುರುವಾರ ಬೆಳಿಗ್ಗೆ 8 ಗಂಟೆಗೆ ಆರಂಭವಾದ ಮತ ಎಣಿಕೆ ಪ್ರಕ್ರಿಯೆ ಸಂಜೆ 4 ಗಂಟೆ ವರೆಗೂ ಕ್ಷೇತ್ರದ ಎಲ್ಲಾ ಮತಗಳನ್ನು ರ‌್ಯಾಂಡಮೈಜೇಷನ್ ಮಾಡಿ ತಲಾ 25 ಮತಗಳನ್ನು ಕಟ್ಟು ಕಟ್ಟುವ ಕೆಲಸ‌ ನಡೆಯಿತು. ನಂತರ ಸಂಜೆ 4 ಗಂಟೆಯಿಂದ 14 ಟೇಬಲ್ ನಲ್ಲಿ ಪ್ರಥಮ ಪ್ರಾಶಸ್ತ್ಯ ಮತ ಎಣಿಕೆ ಆರಂಭವಾಗಿ ಶುಕ್ರವಾರ ಬೆಳಿಗ್ಗೆ 6 ಗಂಟೆ ವರೆಗೆ 8 ಸುತ್ತಿನಲ್ಲಿ ಕೊನೆಗೊಂಡಿತ್ತು. ತದನಂತರ ಎರಡನೇ ಪ್ರಾಶಸ್ತ್ಯ ಮತ ಎಣಿಕೆ ಬೆಳಿಗ್ಗೆ 11 ಗಂಟೆ ವರೆಗೆ ಸಾಗಿತು. ಸಂಪೂರ್ಣ ಮತ ಎಣಿಕೆ ಪ್ರಕ್ರಿಯೆ ಸುದೀರ್ಘ 27 ಗಂಟೆಗಳ ನಿರಂತರವಾಗಿ ನಡೆಯಿತು.

ಶೇ.88.52 ಪುರಸ್ಕೃತ ಮತ:

ಒಟ್ಟು ಚಲಾವಣೆಯಾದ ಮತ‌ ಪ್ರಮಾಣ ಗಮನಿಸಿದಾಗ ಶೆ.88.52ರಷ್ಟು ಮತ ಪುರಸ್ಕೃತವಾದರೆ ಶೇ.11.48 ಮತಗಳು ತಿರಸ್ಕರಿಸಲ್ಪಟ್ಟಿವೆ. ಇನ್ನು ತಿರಸ್ಕೃತ ಮತಗಳು ಗಮನಿಸಿದಾಗ ಅದರಲ್ಲಿ ಚಿನ್ಹೆ ನಮೂದು, ಸಂಖ್ಯಾತ್ಮಕ ಬದಲು ಅಕ್ಷರದಲ್ಲಿ ಆದ್ಯತಾ ನಮೂದು, ಖಾಲಿ ಮತ ಪತ್ರ ಹಾಕಿರುವುದು, ಆದ್ಯತಾ ಸಂಖ್ಯೆ ಪುನರಾವರ್ತನೆ, ಬಾಲ್ ಪೆನ್ ನಿಂದ ಆದ್ಯತಾ ಸಂಖ್ಯೆ ನಮೂದು ಮಾಡಿರುವುದು ಕಂಡುಬಂದಿದೆ.

ಮತ ಎಣಿಕೆ ಹಿನ್ನೆಲೆಯಲ್ಲಿ ಎಣಿಕೆ ಸುತ್ತಮುತ್ತ ಸೂಕ್ತ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ 144 ನಿಷೇಧಾಜ್ಞೆ ಸಹ ಜಾರಿ ಮಾಡಲಾಗಿತ್ತು.

ಕಲಬುರಗಿ, ಬೀದರ, ರಾಯಚೂರು, ಯಾದಗಿರಿ, ಕೊಪ್ಪಳ, ಬಳ್ಳಾರಿ, ವಿಜಯನಗರ ಜಿಲ್ಲಾ ವ್ಯಾಪ್ತಿ ಹೊಂದಿರುವ ಈ ಕ್ಷೇತ್ರದಲ್ಲಿ 99,121 ಪುರುಷರು, 57,483 ಮಹಿಳೆಯರು, ಇತರೆ 19 ಸೇರಿ ಒಟ್ಟು 1,56,623 ಜನ ಮತದಾರರು ಮತದಾನಕ್ಕೆ ಅರ್ಹತೆ ಪಡೆದಿದ್ದರು. ಇದರಲ್ಲಿ ಶೇ.69.61 ರಷ್ಟು ಅಂದರೆ 1,09,031ಜನ ಮತದಾರರು ಕಳೆದ ಜೂನ್ 3 ರಂದು ನಡೆದ ಮತದಾನದಲ್ಲಿ ತಮ್ಮ ಹಕ್ಕು ಚಲಾಯಿಸಿದ್ದರು.

ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದ ಸಾಮಾನ್ಯ ವೀಕ್ಷಕ ಎಂ.ಮಹೇಶ್ವರ ರಾವ್ ಅವರ ಸಮಕ್ಷಮ‌ ಮತ ಎಣಿಕೆ ಸುಸೂತ್ರವಾಗಿ ನಡೆಯಿತು. ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳಾದ ಕಲಬುರಗಿ ಡಿ.ಸಿ. ಬಿ.ಫೌಜಿಯಾ ತರನ್ನುಮ್, ಯಾದಗಿರಿ ಡಿ.ಸಿ. ಡಾ.ಸುಶೀಲಾ ಬಿ., ಬೀದರ ಡಿ.ಸಿ. ಗೋವಿಂದರೆಡ್ಡಿ, ರಾಯಚೂರು ಡಿ.ಸಿ. ಚಂದ್ರಶೇಖರ ನಾಯಕ್, ಕೊಪ್ಪಳ ಡಿ.ಸಿ. ನಳಿನ್ ಅತುಲ್, ಬಳ್ಳಾರಿ ಡಿ.ಸಿ. ಪ್ರಶಾಂತಕುಮಾರ ಮಿಶ್ರಾ, ಅಪರ ಪ್ರಾದೇಶಿಕ ಆಯುಕ್ತ ಇಲಿಯಾಸ್ ಅಹ್ಮದ್ ಇಸಾಮದಿ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಮತ ಎಣಿಕೆ ಅಧಿಕಾರಿ-ಸಿಬ್ಬಂದಿಗಳು ಮತ ಎಣಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.

Ghantepatrike kannada daily news Paper

Leave a Reply

error: Content is protected !!