ಜುಲೈ 13ರಂದು ಕಾಯಕರತ್ನ ಪ್ರಶಸ್ತಿ ಪ್ರದಾನ ಸಮಾರಂಭ: ದಾನಿ ಬಾಬುರಾವ
ಬೀದರ: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಜುಲೈ 13 ರಂದು ಬೆಳಿಗ್ಗೆ 11 ಗಂಟೆಗೆ ರಾಜ್ಯ ಮಟ್ಟದ ಕಾಯಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಶಿಕ್ಷಣ ನಮ್ಮ ಹಕ್ಕು ಕುರಿತು ವಿಚಾರ ಸಂಕಿರಣವನ್ನು ಡಾ.ಚನ್ನಬಸವ ಪಟ್ಟದ್ದೇವರ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪರಿಷತ್ತಿನ ರಾಜ್ಯ ಸಂಯೋಜಕ ಬಾಬುರಾವ ದಾನಿ ತಿಳಿಸಿದರು.
ಬುಧವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಕರೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಅಂದು ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಉದ್ಘಾಟನೆ ಮಾಡಲಿದ್ದಾರೆ. ಪ್ರಶಸ್ತಿಯನ್ನು ಪೌರಾಡಳಿತ ಸಚಿವ ರಹಿಂಖಾನ್ ಹಾಗೂ ಇಸ್ರೋದ ಮಾಜಿ ಅಧ್ಯಕ್ಷರು ಹಾಗೂ ಖ್ಯಾತ ವಿಜ್ಞಾನಿಗಳಾದ ಡಾ.ಎಎಸ್ ಕಿರಣಕುಮಾರ ಪ್ರದಾನ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಹುಲಿಕಲ್ ನಟರಾಜ್ ವಹಿಸಲಿದ್ದಾರೆ. ವಿಶೇಷ ಉಪನ್ಯಾಸವನ್ನು ಮೈಸೂರಿನ ಅಂತರಾಷ್ಟ್ರೀಯ ಕೌಶಲ್ಯ ತರಬೇತಿದಾರರಾದ ಚೇತನರಾಮ ನೀಡಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಕುರಿತು ಸಮಗ್ರ ಮಾಹಿತಿ ನೀಡಿದ ದಾನಿಯವರು, ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಮಠಾಧೀಶರು ಸಾನಿಧ್ಯ ಹಾಗೂ ನೇತೃತ್ವ ವಹಿಸಲಿದ್ದಾರೆ. ನೂತನ ಸಂಸದ ಸಾಗರ ಖಂಡ್ರೆ, ಎರಡನೇ ಬಾರಿಗೆ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಡಾ.ಚಂದ್ರಶೇಖರ ಪಾಟೀಲ, ನೂತನ ವಿಧಾನ ಪರಿಷತ್ ಸದಸ್ಯ ಮಾರುತಿರಾವ ಮೂಳೆ ಹಾಗೂ ಹೈ.ಕ.ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಡಾ.ರಜನೀಶ ವಾಲಿಯವರಗೆ ಸನ್ಮಾನ ನೆರವೇರಲಿದೆ.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲೆಯ ಎಲ್ಲಾ ಶಾಸಕರು ಹಾಗೂ ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ವಿಶೇಷವಾಗಿ ಕಾಯಕ ರತ್ನ ಪ್ರಶಸ್ತಿಯನ್ನು ಕಲಬುರಗಿ, ಮೈಸೂರು, ಬೆಳಗಾವಿ, ಬೆಂಗಳೂರು ವಿಭಾಗದ 39 ಜನ ಸಾಧಕರಿಗೆ ಗುರುತಿಸಿ ಕಾಯಕರತ್ನ ಪ್ರಶಸ್ತಿ ನೀಡಲಾಗುತ್ತಿದೆ. ಸುಮಾರು 23 ಜನ ಸಾಧಕರಿಗೆ ಗೌರವ ಸನ್ಮಾನ ನೆರವೇರಿಸಲಾಗುತ್ತಿದೆ. ವಿವಿಧ ಕಡೆಗಳಿಂದ ಜಿಲ್ಲೆಗೆ ಆಗಮಿಸುತ್ತಿರುವ ಅತಿಥಿ ಗಣ್ಯರನ್ನು ಗುರುನಾನಕ ಹಾಗೂ ಸಿದ್ಧಾರೂಢ ಮಠದಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಪ್ರತಿಯೊಬ್ಬರೂ ಈ ಕಾರ್ಯಕ್ರಮದಲ್ಲಿ ತಪ್ಪದೇ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.
ಪರಿಷತ್ತಿನ ಜಿಲ್ಲಾಧ್ಯಕ್ಷ ದೇವಿಪ್ರಸಾದ ಕಲಾಲ್, ಪ್ರಮುಖರಾದ ಡಾ.ಅಬ್ದುಲ್ ಖದೀರ್, ರೇವಣಸಿದ್ದಪ್ಪ ಜಲಾದೆ, ಸುರೇಶ ಚನಶೆಟ್ಟಿ, ಶಿವಶಂಕರ ಟೋಕರೆ, ಮಹ್ಮದ್ ರಫಿ ತಾಳಿಕೋಟೆ, ರಾಜೇಂದ್ರ ವಣಗೀರೆ, ಪಾಂಡುರಂಗ ಬೆಲ್ದಾರ್ ಸೇರಿದಂತೆ ಇನ್ನಿತರರು ಪತ್ರಿಕಾ ಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
ಬಾಕ್ಸ್ ನ್ಯೂಜ್:
ಬೆಂಗಳೂರಿನ ನಾರಾಯಣ ಹೃದಯಾಲಯ ಹಾಗೂ ಶಾಹಿನ್ ಸಮೂಹ ಶಿಕ್ಷಣ ಸಂಸ್ಥೆ ವತಿಯಿಂದ 140 ಮೆಡಿಕಲ್ ವಿದ್ಯಾರ್ಥಿಗಳಿಗೆ ಈ ವರ್ಷ ಉಚಿತ ತರಬೇತಿ ನೀಡಲಾಗುವುದು ಎಂದು ಶಾಹಿನ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ತಿಳಿಸಿದರು. ಅದರಲ್ಲೂ ಕನ್ನಡ ಮಾಧ್ಯಮದ 50 ವಿದ್ಯಾರ್ಥಿಗಳಿಗೆ, ಕಲ್ಯಾಣ ಕರ್ನಾಟಕದ 25 ವಿದ್ಯಾರ್ಥಿಗಳಿಗೆ ಮತ್ತು ಅನ್ಯ ಜಿಲ್ಲೆಗಳ 25 ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡಲಾಗುತ್ತಿದೆ. ನಾರಾಯಣ ಹೃದಯಾಲಯ ಹಾಗೂ ಶಾಹಿನ್ ಸಮೂಹ ಶಿಕ್ಷಣ ಸಂಸ್ಥೆಗಳು ತಲಾ 50 ಪ್ರತಿಶತದಷ್ಟು ಶಿಷ್ಯವೇತನ ಸಹ ನೀಡಲಾಗುವುದು ಎಂದು ಡಾ.ಖದೀರ್ ಹೇಳಿದರು.