ಜಿಲ್ಲೆಯ ಆದಿವಾಸಿಗಳು ಪಾಲ್ಗೊಳ್ಳಿ: ಪಂಡಿತರಾವ್ ಚಿದ್ರಿ ಮನವಿ 9 ರಂದು ವಿಶ್ವ ಆದಿವಾಸಿ ದಿನಾಚರಣೆ
ಬೀದರ್: ಬೆಂಗಳೂರಿನ ವಸಂತನಗರದ ಕಂಟೋನ್ಮೆಂಟ್ ರೈಲು ನಿಲ್ದಾಣ ಸಮೀಪದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಗಸ್ಟ್ 9 ರಂದು ಬೆಳಿಗ್ಗೆ 11.30ಕ್ಕೆ 29ನೇ ವಿಶ್ವ ಆದಿವಾಸಿ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ಆದಿವಾಸಿ ಗೊಂಡ ಸಂಘದ ರಾಜ್ಯ ಉಪಾಧ್ಯಕ್ಷ ಪಂಡಿತರಾವ್ ಚಿದ್ರಿ ತಿಳಿಸಿದ್ದಾರೆ.
ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ಹಾಗೂ ಕಾಗಿನೆಲೆ ಕನಕ ಗುರುಪೀಠದ ವತಿಯಿಂದ ಆಯೋಜಿಸಲಾದ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ. ಸಿದ್ದರಾಮಾನಂದ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಸಚಿವರು, ಶಾಸಕರು ಹಾಗೂ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.
1995 ರಿಂದ ವಿಶ್ವ ಆದಿವಾಸಿ ದಿನ ಆಚರಿಸಿಕೊಂಡು ಬರಲಾಗುತ್ತಿದೆ. ‘ಪರಿವರ್ತನೆಯ ಪ್ರತಿನಿಧಿಗಳಾಗಲು ಆದಿವಾಸಿ ಯುವಕರ ಸ್ವ ಸಂಕಲ್ಪ’ ಈ ಬಾರಿಯ ದಿನಾಚರಣೆ ಘೋಷವಾಕ್ಯವಾಗಿದೆ ಎಂದು ತಿಳಿಸಿದ್ದಾರೆ. ‘ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಅಭಿವೃದ್ಧಿ, ಆರೋಗ್ಯ, ಸಂಸ್ಕøತಿ, ಪರಿಸರ, ಮಾನವ ಹಕ್ಕುಗಳ ಸಂರಕ್ಷಣೆ ಕುರಿತು ಆದಿವಾಸಿಗಳಲ್ಲಿ ಜಾಗೃತಿ ಮೂಡಿಸುವುದು ಹಾಗೂ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಕಾರ್ಯಕ್ರಮದಲ್ಲಿ ಆದಿವಾಸಿಗಳ 20 ಪ್ರಮುಖ ಬೇಡಿಕೆಗಳನ್ನು ಮುಖ್ಯಮಂತ್ರಿ ಅವರ ಮುಂದಿಡಲಾಗುವುದು ಎಂದು ತಿಳಿಸಿದರು.
ವಿಶ್ವದ 195 ಯುಎನ್‍ಒ ರಾಷ್ಟ್ರಗಳ ಪೈಕಿ 90 ರಾಷ್ಟ್ರಗಳಲ್ಲಿ 37 ಕೋಟಿ ಆದಿವಾಸಿಗಳು ಇದ್ದಾರೆ. ಆದಿವಾಸಿ ಸಮುದಾಯಗಳ ಸಂಖ್ಯೆ ಸುಮಾರು 5 ಸಾವಿರ ಹಾಗೂ ಅವರು ಬಳಸುವ ಭಾಷೆಗಳ ಸಂಖ್ಯೆ 6 ಸಾವಿರ ಇದೆ ಎಂದು ಹೇಳಿದರು.
ರಾಜ್ಯದ ಎಲ್ಲ ಜಿಲ್ಲೆಗಳ ಆದಿವಾಸಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬೀದರ್ ಜಿಲ್ಲೆಯ ಸಮುದಾಯದ ಜನರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.