ಜಿಲ್ಲಾಮಟ್ಟದ ಕವಿಗೋಷ್ಠಿ ಸ್ಪರ್ಧೆ: ಮೂವರು ರಾಜ್ಯಮಟ್ಟಕ್ಕೆ ಆಯ್ಕೆ ಯುವ ಪೀಳಿಗೆ ಭಾರತೀಯ ಸಂಸ್ಕøತಿ ಅನುಕರಿಸಲಿ
ಬೀದರ್: ಯುವ ಪೀಳಿಗೆ ಭಾರತೀಯ ಸಂಸ್ಕøತಿ ಅನುಕರಿಸಬೇಕು ಎಂದು ಬಿ.ವಿ. ಭೂಮರಡ್ಡಿ ಕಾಲೇಜು ಪ್ರಾಚಾರ್ಯ ಡಾ. ಪಿ. ವಿಠ್ಠಲರೆಡ್ಡಿ ನುಡಿದರು.
ಇಲ್ಲಿಯ ರಾಣಿ ಕಿತ್ತೂರು ಚನ್ನಮ್ಮ ವೃತ್ತದ ಸಮೀಪ ಇರುವ ಮಹಾಲಕ್ಷ್ಮಿ ಸಭಾಂಗಣದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಜಿಲ್ಲಾಮಟ್ಟದ ಸ್ವರಾಜ್ಯ-ಸುರಾಜ್ಯ ಕವಿಗೋಷ್ಠಿ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತೀಯ ಸಂಸ್ಕøತಿ ವಿಶ್ವದಲ್ಲೇ ಶ್ರೇಷ್ಠವಾಗಿದೆ. ಹೀಗಾಗಿ ದೇಸಿ ಸಂಸ್ಕøತಿ ಬಗ್ಗೆ ಅಭಿಮಾನ ಬೆಳೆಕೊಳ್ಳಬೇಕು ಎಂದು ಹೇಳಿದರು.
ನಮ್ಮ ಪೂರ್ವಜರು ಪ್ರಾಣದ ಹಂಗು ತೊರೆದು ಹೊರಾಡಿ ಗಳಿಸಿಕೊಟ್ಟ ಸ್ವರಾಜ್ಯದ ಮಹತ್ವವನ್ನು ಕವಿಗಳು ತಮ್ಮ ಕವನಗಳ ಮೂಲಕ ಸಮಾಜಕ್ಕೆ ಮನವರಿಕೆ ಮಾಡಬೇಕು. ಸದೃಢ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಬೇಕು ಎಂದು ತಿಳಿಸಿದರು.
ಸಮಾಜದಲ್ಲಿ ಬದಲಾವಣೆ ತರುವಂಥ ಗಟ್ಟಿ ಸಾಹಿತ್ಯ ರಚನೆ ಇಂದಿನ ಅವಶ್ಯಕತೆಯಾಗಿದೆ ಎಂದು ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಪುಣ್ಯವತಿ ವಿಸಾಜಿ ಅಭಿಪ್ರಾಯಪಟ್ಟರು.
ದೇಸಿ ಕಲೆ, ಸಂಸ್ಕøತಿ ಉಳಿಸಿ ಬೆಳೆಸಲು ಎಲ್ಲರೂ ಕೈಜೋಡಿಸಬೇಕಿದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಜಿಲ್ಲಾ ಘಟಕದ ಅಧ್ಯಕ್ಷೆ ರಾಣಿ ಸತ್ಯಮೂರ್ತಿ ನುಡಿದರು.
ಪರಿಷದ್ ಬರಹಗಾರರಿಗೆ ವೇದಿಕೆ ಕಲ್ಪಿಸುವ ದಿಸೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಕವಿಗಳನ್ನು ಪ್ರೋತ್ಸಾಹಿಸಲು ಕವಿಗೋಷ್ಠಿ ಸ್ಪರ್ಧೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಪರಿಷದ್ ಕಲಬುರಗಿ ವಿಭಾಗ ಸಂಯೋಜಕ ಸತ್ಯಮೂರ್ತಿ ಆಶಯ ನುಡಿ ಆಡಿದರು.
ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ 15 ಕವಿಗಳು ಸ್ವರಾಜ್ಯ-ಸುರಾಜ್ಯದ ಮೇಲೆ ಬೆಳಕು ಚೆಲ್ಲುವ ಸ್ವರಚಿತ ಕವನ ವಾಚಿಸಿದರು. ಕವಿಗಳಾದ ಎನ್.ಆರ್. ರಗಟೆ, ಸುನಿತಾ ಕೂಡ್ಲಿಕರ್ ಹಾಗೂ ಅಶೋಕ ಎ. ಅವರ ಕವನಗಳು ಉತ್ಕøಷ್ಟ ಕವನ ಪ್ರಶಸ್ತಿಗೆ ಭಾಜನವಾದವು. ಅಲ್ಲದೆ, ಈ ಮೂವರು ಕವಿಗಳು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾದರು.
ಸಾಹಿತಿಗಳಾದ ಭಾರತಿ ವಸ್ತ್ರದ್ ಹಾಗೂ ಸಂಜುಕುಮಾರ ಅತಿವಾಳೆ ತೀರ್ಪುಗಾರರಾಗಿದ್ದರು.
ನಾಟ್ಯಶ್ರೀ ನೃತ್ಯಾಲಯದ ಮಕ್ಕಳು ದೇಶಭಕ್ತಿ ಗೀತೆ ನೃತ್ಯ ಪ್ರದರ್ಶಿಸಿದರು. ಸವಿಗಾನ ಮ್ಯೂಸಿಕ್ ಅಕಾಡೆಮಿ ಅಧ್ಯಕ್ಷೆ ಭಾನುಪ್ರಿಯ ಅರಳಿ ದೇಶಭಕ್ತಿ ಗೀತೆ ಸುಶ್ರಾವ್ಯವಾಗಿ ಹಾಡಿದರು.
ಪ್ರೊ. ವೀರಶೆಟ್ಟಿ ಮೈಲೂರಕರ್, ರಾಮಕೃಷ್ಣ ಸಾಳೆ, ಶಿವಕುಮಾರ ಕಟ್ಟೆ, ಕೆ. ಗುರುಮೂರ್ತಿ, ಅಪ್ಪಾರಾವ್ ಸೌದಿ ಮತ್ತಿತರರು ಉಪಸ್ಥಿತರಿದ್ದರು.
ಮೈತ್ರಿ ಹಾಗೂ ತ್ರಿಶಾ ಅವರು ಸರಸ್ವತಿ ಪ್ರಾರ್ಥನೆ ನಡೆಸಿಕೊಟ್ಟರು. ಡಾ. ಶ್ರೇಯಾ ಯಶಪಾಲ್ ಮಹೇಂದ್ರಕರ್ ನಿರೂಪಿಸಿದರು. ಡಾ. ಜಗದೇವಿ ತಿಬಶೆಟ್ಟಿ ಸ್ವಾಗತಿಸಿದರು. ಪ್ರೊ. ಉಮಾಕಾಂತ ಮೀಸೆ ವಂದಿಸಿದರು.