ಬೀದರ್

ಜಾಗತಿಕ ಮಟ್ಟದಲ್ಲಿ ಬಸವ ತತ್ವ ಪ್ರಕಾಶಿಸುತ್ತಿದೆ – ಲಕ್ಷ್ಮೀ ಬಿರಾದಾರ

ಬೀದರ: ಜಾಗತಿಕ ಮಟ್ಟದಲ್ಲಿ ಬಸವ ತತ್ವ ಪ್ರಕಾಶಿಸುತ್ತಿದೆ. ಹೀಗಾಗಿಯೇ ಸಾಗರದಾಚೆ ಇಂಗ್ಲೆಂಡ್‍ನಲ್ಲಿ ಬಸವೇಶ್ವರರ ಪುತ್ಥಳಿ ಸ್ಥಾಪಿಸಲಾಗಿದೆ. ದೇಶದ ಪ್ರಧಾನಿಗಳು ಕೂಡಾ ಬಸವೇಶ್ವರರ ಬಗ್ಗೆ ಎಲ್ಲಾ ಕಡೆ ಉಲ್ಲೇಖ ಮಾಡುತ್ತಿರುತ್ತಾರೆ. ಇಂದು ಬಸವ ತತ್ವದ ಪ್ರಚಾರಕ್ಕಾಗಿ ಸಾಕಷ್ಟು ಮಠ, ಪೀಠಗಳು ಟೊಂಕಕಟ್ಟಿ ನಿಂತಿವೆ. ಅವುಗಳಲ್ಲಿ ಬಸವ ಧರ್ಮ ಪೀಠ ಮತ್ತು ರಾಷ್ಟ್ರೀಯ ಬಸವ ದಳ ಅಗ್ರಗಣ್ಯ ಸ್ಥಾನದಲ್ಲಿ ನಿಲ್ಲುತ್ತದೆ ಎಂದು ನರೇಗಾ ಯೋಜನೆಯ ಸಹಾಯಕ ನಿರ್ದೇಶಕರಾದ ಲಕ್ಷ್ಮೀ ಬಿರಾದಾರ ಹೇಳಿದರು.
ರಾಷ್ಟ್ರೀಯ ಬಸವ ದಳ, ಲಿಂಗಾಯತ ಸಮಾಜದ ವತಿಯಿಂದ ನಗರದ ಡಾ. ಗುರುಪಾದಪ್ಪ ನಾಗಮಾರಪಳ್ಳಿ ಆಸ್ಪತ್ರೆ ಎದುರುಗಡೆ ಇರುವ ಶಿವಶರಣಪ್ಪ ಪಾಟೀಲ ಅವರ ಮಹಡಿಯಲ್ಲಿ ಹಮ್ಮಿಕೊಂಡ ಶ್ರೀ ಚನ್ನಬಸವೇಶ್ವರರ ಜೀವನ ಚರಿತ್ರೆ ಹಾಗೂ ವಿಶ್ವಧರ್ಮ ಪ್ರವಚನದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಮನುಷ್ಯನ ದಿನನಿತ್ಯದ ಜೀವನ ಶರಣರ ವಚನಗಳಿಂದಲೇ ಆರಂಭಗೊಂಡು ರಾತ್ರಿ ಮುಕ್ತಾಯಗೊಳ್ಳುತ್ತದೆ. ಅಷ್ಟೊಂದು ಶರಣರ ವಚನಗಳು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿವೆ. ವಚನ ವಿಶ್ವಸಾಹಿತ್ಯದ ಹೃದಯಾಗಿದೆ. ಪ್ರತಿಯೊಬ್ಬರೂ ದಿನನಿತ್ಯ ಐದೈದು ವಚನಗಳನ್ನು ಓದಬೇಕೆಂದು ಸಲಹೆ ನೀಡಿದರು.
ಬೀದರ ಬಸವ ಮಂಟಪದ ಪೂಜ್ಯ ಶ್ರೀ ಸದ್ಗುರು ಮಾತೆ ಸತ್ಯಾದೇವಿ ಮಾತನಾಡಿ ಶ್ರಾವಣ ಮಾಸದಲ್ಲಿ ಅವಗುಣ ಕಳೆದುಕೊಂಡು ಶಿವಗುಣಗಳನ್ನು ಬೆಳೆಸಿಕೊಳ್ಳಬೇಕು. ತನ್ಮೂಲಕ ಸಂಸಾರದಲ್ಲಿ ಸದ್ಗತಿ ಪಡೆದುಕೊಳ್ಳಲು ಪ್ರಯತ್ನಿಸಬೇಕು. ಜಗತ್ತಿನಲ್ಲಿ ಜನರು ಸಾಕಷ್ಟು ಬಿಜಿ ಇರುತ್ತಾರೆ. ಇದ್ದುದರಲ್ಲಿಯೇ ಧರ್ಮ, ಸಮಾಜ ಮತ್ತು ಆಧ್ಯಾತ್ಮದ ಕಡೆಗೆ ಗಮನ ಹರಿಸಬೇಕು. ಇದರಿಂದ ವ್ಯಕ್ತಿಯ ಮನಶುದ್ಧಿ, ಹೃದಯ ಶುದ್ಧಿಯಾಗಿ ಜೀವನ ಪಾವನವಾಗುತ್ತದೆ ಎಂದು ಆಶಿರ್ವಚನ ನೀಡಿದರು.
ಪ್ರಸಾದ ದಾಸೋಹಿಗಳಾದ ಮನ್ನಳ್ಳಿ ಗ್ರಾ.ಪಂ. ಕಾರ್ಯದರ್ಶಿ ಗಣಪತಿ ಬಿರಾದಾರ ದಂಪತಿಗಳಿಗೆ ಸನ್ಮಾನಿಸಲಾಯಿತು. ಇದೇ ವೇಳೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಮಹೇಶ ಬಿರಾದಾರ, ನಾಗೂರ ಪಿಡಿಓ ವಿಜಯಕುಮಾರ ಪಾಟೀಲ, ಮರಕುಂದಾ ಗ್ರಾ.ಪಂ. ಕಾರ್ಯದರ್ಶಿ ರಘುನಾಥರೆಡ್ಡಿ ನಿರ್ಣಾ, ಬರೂರ ಗ್ರಾ.ಪಂ. ಪಿಡಿಓ ಸಂತೋಷ ಮಡಕಿ, ಮಾಳೆಗಾಂವ ಗ್ರಾ.ಪಂ. ಕಾರ್ಯದರ್ಶಿ ರಮೇಶ ಸ್ವಾಮಿ, ಗ್ರಾ.ಪಂ. ಮರಖಲ ಕಾರ್ಯದರ್ಶಿ ಸಂಗಪ್ಪ ನಾಗೋರಾ. ಡಾಟಾ ಎಂಟ್ರಿ ಆಪರೇಟರ್ ಯದಲಾಪುರ ದೇವಿಂದ್ರ, ಶಿವಶರಣಪ್ಪ ಪಾಟೀಲ ಹಾರೂರಗೇರಿ, ಸತೀಶ ಪಾಟೀಲ, ವಿಶ್ವನಾಥ ಗೊಂದೆಗಾಂವ, ಬಸವಂತರಾವ ಬಿರಾದಾರ, ಸುರೇಶ ಪಾಟೀಲ, ಸುನಿತಾ ಬಿರಾದಾರ, ಅಕ್ಕಮಹಾದೇವಿ ಸ್ವಾಮಿ ಸೇರಿದಂತೆ ನೂರಾರು ಭಕ್ತಾದಿಗಳು ಉಪಸ್ಥಿತರಿದ್ದರು. ಬಸವಕುಮಾರ ಚಟನಳ್ಳಿ ಸ್ವಾಗತಿಸಿದರು. ಶ್ರೀನಾಥ ಕೋರೆ ನಿರೂಪಿಸಿದರು. ಮಹಾರುದ್ರ ಡಾಕುಳಗೆ ವಂದಿಸಿದರು.

Ghantepatrike kannada daily news Paper

Leave a Reply

error: Content is protected !!