ಜಯಂತಿಗೆ ಗೈರು ಹಾಜರಾಗಿರುವುದಕ್ಕೆ ಏಕತಾ ಫೌಂಡೇಶನ್ ಅಧ್ಯಕ್ಷ ರವೀಂದ್ರ ಸ್ವಾಮಿ ಖಂಡನ
ಔರಾದ:ಏ.15: ಇಡೀ ಜಗತ್ತು ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿ ಆಚರಣೆ ಸಂಭ್ರಮದಲ್ಲಿದ್ದರೆ ಔರಾದ ಬಿ. ಮೀಸಲು ಕ್ಷೇತ್ರದ ಶಾಸಕ ಪ್ರಭು ಚವ್ಹಾಣ ಅವರು ಸಂವಿಧಾನ ಶಿಲ್ಪಿಯ ಜಯಂತಿಗೆ ಗೈರು ಹಾಜರಾಗಿರುವುದಕ್ಕೆ ಏಕತಾ ಫೌಂಡೇಶನ್ ಅಧ್ಯಕ್ಷ ರವೀಂದ್ರ ಸ್ವಾಮಿ ಖಂಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಔರಾದನಲ್ಲಿ ತಾಲ್ಲೂಕಾ ಆಡಳಿತ ವತಿಯಿಂದ ಅಧಿಕಾರಿಗಳು ಡಾ. ಅಂಬೇಡ್ಕರರ ಜಯಂತಿ ಆಚರಣೆ ಮಾಡಿದ್ದಾರೆ. ಆದರೆ ಬಾಬಾ ಸಾಹೇಬರು ರಚಿಸಿದ ಸಂವಿಧಾನದ ಹೆಸರಿನ ಮೇಲೆ ನಕಲಿ ಜಾತಿ ಪ್ರಮಾಣ ಪತ್ರ ಪಡೆದು ಅಧಿಕಾರ ಅನುಭವಿಸಿದ ಚವ್ಹಾಣ ಅವರು ಅವರ ಜಯಂತಿಗೆ ಇರದಷ್ಟು ವೈಯಕ್ತಿಕ ಕೆಲಸ ಏನಿತ್ತು? ಎಂಬ ಪ್ರಶ್ನೆ ತಾಲೂಕಿನ ಪ್ರಜೆಗಳು ಕೇಳುತಿದ್ದಾರೆ ಎಂದು ಸ್ವಾಮಿ ತಿಳಿಸಿದ್ದಾರೆ.
ಈ ಹಿಂದೆ ನ. 1 ರ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಪ್ರಶ್ನೆ ಮಾಡಿದ ಕನ್ನಡಪರ ಹೋರಾಟಗಾರರ ಮೇಲೆ ಕೇಸ್ ಹಾಕಿಸಿ ಅವರ ಹೋರಾಟ ಹತ್ತಿಕ್ಕಲು ಪ್ರಯತ್ನ ಮಾಡಿದ ಚವ್ಹಾಣ ಅವರು ದಲಿತಪರ ಹೋರಾಟಗಾರರ ಮೇಲೂ ಸುಳ್ಳು ಕೇಸ್ ದಾಖಲಿಸಿ ಸರ್ವಾಧಿಕಾರಿ ಧೋರಣೆ ತಾಳಿದ್ದಾರೆ. ತಾಲೂಕಿನಲ್ಲಿ ಒಂದು ರೀತಿ ಭಯದ ವಾತಾವರಣ ನಿರ್ಮಾಣವಾಗಿದೆ. ಹೋರಾಟಗಾರರು ಪ್ರಶ್ನೆ ಮಾಡಲು ಹೆದರುತಿದ್ದಾರೆ ಎಂದು ರವಿಸ್ವಾಮಿ ಆರೋಪಿಸಿದರು.
ಡಾ. ಅಂಬೇಡ್ಕರರ 134ನೇ ಜಯಂತಿಗೆ ಗೈರು ಹಾಜರಾದ ಶಾಸಕ ಪ್ರಭು ಚವ್ಹಾಣ ಅವರು ಅವಮಾನಗೈದಿದ್ದಾರೆ ಎಂದು ರವೀಂದ್ರ ಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.