ಜನಸೇವಾ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ ಕೃಷ್ಣ- ರಾಧೆ ವೇಷಧಾರಿ ಮಕ್ಕಳ ಮೆರವಣಿಗೆ
ಬೀದರ್: ನಗರದ ಪ್ರತಾಪನಗರದ ಜನಸೇವಾ ಶಿಶು ಮಂದಿರ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ಸೋಮವಾರ ಹರ್ಷೋಲ್ಲಾಸದಿಂದ ಆಚರಿಸಲಾಯಿತು.
ಶಾಲೆಯ ಆಡಳಿತಾಧಿಕಾರಿ ಸೌಭಾಗ್ಯವತಿ ಅವರ ನೇತೃತ್ವದಲ್ಲಿ ನಡೆದ ಕೃಷ್ಣ-ರಾಧೆ ವೇಷಧಾರಿ ಮಕ್ಕಳ ನೃತ್ಯ, ಮೊಸರು ಗಡಿಗೆ ಒಡೆಯುವ ಸ್ಪರ್ಧೆ, ಬೆಣ್ಣೆ ಸವಿಯುವುದು, ಮಾತೆಯರು-ಶಿಕ್ಷಕಿಯರ ಕೋಲಾಟ ಮೊದಲಾದ ಕಾರ್ಯಕ್ರಮಗಳು ಸಂಭ್ರಮ ಇಮ್ಮಡಿಗೊಳಿಸಿದವು.
ಗೋವಿಗೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿದ್ಧಾರೂಢ ಆಶ್ರಮದ ಗಣೇಶ ಮಹಾರಾಜರು, ಕೃಷ್ಣ ನ್ಯಾಯದ ಸಂಕೇತ. ಧರ್ಮದ ರಕ್ಷಕ, ಅಧರ್ಮದ ನಾಶಕ ಎಂದು ಬಣ್ಣಿಸಿದರು.
ಕೃಷ್ಣನ ಲೀಲೆ ಅಪಾರವಾಗಿದೆ. ಕೃಷ್ಣನನ್ನು ಭಕ್ತಿಯಿಂದ ನೆನೆದರೆ ಎಲ್ಲ ಸಂಕಷ್ಟಗಳು ದೂರವಾಗುತ್ತವೆ ಎಂದು ತಿಳಿಸಿದರು.
ಜನಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ರೇವಣಸಿದ್ದಪ್ಪ ಜಲಾದೆ ಮಾತನಾಡಿ, ಕೃಷ್ಣನ ಸ್ಮರಣೆಯಿಂದ ಸುಂದರ ಜೀವನ ನಮ್ಮದಾಗುತ್ತದೆ ಎಂದು ಹೇಳಿದರು.
ಜನಸೇವಾ ಪ್ರತಿಷ್ಠಾನದ ಅಧ್ಯಕ್ಷ ಬಸವರಾಜ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಖಜಾಂಚಿ ಶಿವರಾಜ ಹುಡೇದ್, ಸದಸ್ಯ ಶಿವಲಿಂಗಪ್ಪ ಜಲಾದೆ ಮತ್ತಿತರರು ಇದ್ದರು.
ಇದಕ್ಕೂ ಮುನ್ನ ಮಾಧವನಗರದ ಹನುಮಾನ ಮಂದಿರದಿಂದ ಪ್ರತಾಪನಗರ, ಎಲ್.ಐ.ಸಿ. ಕಾಲೊನಿ ಮಾರ್ಗವಾಗಿ ಜನಸೇವಾ ಶಾಲೆ ವರೆಗೆ ಜರುಗಿದ ಕೃಷ್ಣ-ರಾಧೆ ವೇಷಧಾರಿ ಮಕ್ಕಳ ಆಕರ್ಷಕ ಮೆರವಣಿಗೆ ನೋಡುಗರ ಗಮನ ಸೆಳೆಯಿತು.