ಜನರ ನೋವಿಗೆ ಮಾನವೀಯ ನೆಲೆಗಟ್ಟಿನಲ್ಲಿ ಸ್ಪಂದಿಸಲು ಸಚಿವ ಈಶ್ವರ ಖಂಡ್ರೆ ಸೂಚನೆ
ಬೀದರ, ಅಗಸ್ಟ್ 28 ಜನಸ್ಪಂದನಾ ಕಾರ್ಯಕ್ರಮಕ್ಕೆ ಹೆಚ್ಚಿನ ಜನರು ಬಂದಿಲ್ಲ ಎಂದರೆ ಜಿಲ್ಲಾಡಳಿತ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಜನರಿಗೆ ಉತ್ತಮ ಸೇವೆ ದೊರಕುತ್ತಿದೆ ಎಂದರ್ಥ, ಜನ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಹೆಚ್ಚಿನ ಸಮಸ್ಯೆಗಳನ್ನು ತಂದರೆ ಆಡಳಿತದಲ್ಲಿ ವೈಫಲ್ಯವಿದೆ ಎಂದಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.
ಅವರು ಸೋಮವಾರ ಬೀದರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಇವರ ಸಂಯುಕ್ತಾಶ್ರಯದಲ್ಲಿ ಪೂಜ್ಯ ಶ್ರೀ ಚನ್ನಬಸವ ಪಟ್ಟದೇವರು ರಂಗ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕರ ಕುಂದು ಕೊರತೆಗಳ ಜನಸ್ಪಂದನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಹಿಂದೆ ರಾಜ, ಮಹಾರಾಜರ ಕಾಲದಲ್ಲಿ ದೊರೆತನಕ ದೂರು ಒಯ್ಯುತ್ತಿದ್ದರು. ಈಗ ಮುಖ್ಯಮಂತ್ರಿಗಳ ಜನತಾದರ್ಶನ ಕಾರ್ಯಕ್ರಮಕ್ಕೆ ಹೋಗುತ್ತಾರೆ. ಯಾವುದೇ ಕಾರಣಕ್ಕೂ ಬೀದರ ಜನರು 700 ಕಿ.ಮೀ. ದೂರದ ಬೆಂಗಳೂರಿಗೆ ಹೋಗಿ ದೂರು ನೀಡದ ರೀತಿಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಲು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಇಂದು ಜನಸಂಖ್ಯೆ ಹೆಚ್ಚಾಗಿದೆ ಜನರ ಸಮಸ್ಯೆಗಳೂ ಹೆಚ್ಚಾಗುತ್ತಿವೆ. ಬೀದರ ಜಿಲ್ಲೆಯಲ್ಲಿ ಸುಮಾರು 15 ಲಕ್ಷ ಜನರಿದ್ದು, ವೈಯಕ್ತಿಕ ಸಮಸ್ಯೆಗಳೂ ಇರುತ್ತವೆ. ಸಾಮೂಹಿಕ ಸಮಸ್ಯೆಗಳೂ ಇರುತ್ತವೆ. ಈ ನಿಟ್ಟಿನಲ್ಲಿ ಜನರು ಸರ್ಕಾರಿ ಕಚೇರಿಗಳಿಗೆ ಸೇವೆ ಪಡೆಯಲು ಬಂದಾಗ ಮಾನವೀಯತೆಯ ನೆಲೆಗಟ್ಟಿನಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯನಿರ್ವಹಿಸಬೇಕು. ಸರ್ಕಾರಿ ನೌಕರಿ ತಮಗೆ ಜನಸೇವೆ ಮಾಡಲು ದೊರೆತಿರುವ ಅವಕಾಶ ಎಂದು ತಿಳಿದು ಜನರಿಗೆ ಕಾನೂನಿನ ಚೌಕಟ್ಟಿನೊಳಗೆ ಮತ್ತು ತಮ್ಮ ಇತಿಮಿತಿಯಲ್ಲಿ ನಿಯಮಬದ್ಧವಾಗಿ ಭ್ರಷ್ಟಾಚಾರ ಮುಕ್ತವಾಗಿ ಸೇವೆ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಇಂದು ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಸುಮಾರು 40 ಕೌಂಟರ್‌ಗಳನ್ನು ತೆರೆಯಲಾಗಿದೆ. ಈ ಎಲ್ಲ ಕೌಂಟರ್‌ಗಳಲ್ಲಿ ಆಯಾ ಇಲಾಖೆಗೆ ಸಂಬAಧಿಸಿದ ಸಮಸ್ಯೆ ಆಲಿಸಿ, ಅಹವಾಲು ಸ್ವೀಕರಿಸಿ ಪ್ರತಿಯೊಬ್ಬರಿಗೂ ಒಂದೊAದು ದೂರು ಸಂಖ್ಯೆ ನೀಡಿ, ಆದ್ಯತೆಯ ಮೇಲೆ ಈ ಎಲ್ಲ ಸಮಸ್ಯೆ ಪರಿಹರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.
ನಮ್ಮ ಸರ್ಕಾರ ನುಡಿದಂತೆ ನಡೆಯುತ್ತಿದ್ದು, ಐದೂ ಗ್ಯಾರಂಟಿಗಳನ್ನು ಜಾರಿಗೆ ತರುತ್ತಿದೆ. ಈಗಾಗಲೇ ಶಕ್ತಿ ಯೋಜನೆಯಡಿ ಕೋಟ್ಯಾಂತರ ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಇನ್ನು ಅನ್ನಭಾಗ್ಯ ಯೋಜನೆಯಡಿ 5 ಕೆ.ಜಿ. ಅಕ್ಕಿ ಉಚಿತವಾಗಿ ವಿತರಿಸಲಾಗುತ್ತಿದ್ದು, ಉಳಿದ 5 ಕೆ.ಜಿ. ಅಕ್ಕಿಗೆ ಹಣವನ್ನು ನೇರ ಸವಲತ್ತು ವರ್ಗಾವಣೆ ಮೂಲಕ ಫಲಾನುಭವಿಗಳ ಖಾತೆಗೆ ವರ್ಗಾಯಿಸಲಾಗುತ್ತಿದೆ. ಗೃಹಲಕ್ಷಿ ಯೋಜನೆಯಡಿ ಮನೆಯ ಯಜಮಾನಿಗೆ ತಲಾ 2 ಸಾವಿರ ರೂಪಾಯಿ ನಗದು ವರ್ಗಾವಣೆ ಮಾಡುವ ಮಹತ್ವಾಕಾಂಕ್ಷೆಯ ಯೋಜನೆಗೆ ಮೈಸೂರಿನಲ್ಲಿ ಅಗಸ್ಟ್ 30 ರಂದು ಚಾಲನೆ ನೀಡಲಾಗುವುದು ಎಂದರು.
ಈಗಾಗಲೇ ಸರಾಸರಿ 200 ಯುನಿಟ್‌ವರೆಗೆ ವಿದ್ಯುತ್ ಉಚಿತವಾಗಿ ನೀಡುವ ಯೋಜನೆಯೂ ಕಾರ್ಯಗತವಾಗಿದೆ. ಇನ್ನುಳಿದ ಒಂದು ಯೋಜನೆ ನಿರುದ್ಯೋಗಿ ಯುವಜನರಿಗೆ ಭತ್ಯೆ ನೀಡುವುದಾಗಿದ್ದು, ಅದನ್ನೂ ಸರ್ಕಾರ ಜಾರಿಗೆ ತರಲು ಕಾರ್ಯೋನ್ಮುಖವಾಗಿದೆ. ಈ ಯೋಜನೆಗಳ ಲಾಭ ಪ್ರತಿಯೊಬ್ಬ ದುರ್ಬಲ, ವಂಚಿತರಿಗೂ ದೊರಕಬೇಕು. ಯಾವುದೇ ಒಬ್ಬ ವ್ಯಕ್ತಿ ಗ್ಯಾರಂಟಿಗಳ ಫಲ ದೊರಕದೆ ವಂಚಿತರಾಗಬಾರದು. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸಿ, ಅವರಿಗೆ ಗ್ಯಾರಂಟಿಯ ಪ್ರಯೋಜನ ಪಡೆಯುವಲ್ಲಿ ಇರುವ ತೊಡಕುಗಳನ್ನು ನಿವಾರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಯುವ ಶಕ್ತಿ ಅಣು ಶಕ್ತಿ ಇದ್ದಂತೆ, ಆದರೆ ಇತ್ತಿಚೆಗೆ ಬೀದರ ಜಿಲ್ಲೆಯ ಯುವಕರು ನಿರುದ್ಯೋಗ ಸಮಸ್ಯೆಯಿಂದ ಪರಿತಪ್ಪಿಸುತ್ತಿದ್ದಾರೆ ಅವರ ಈ ಬವಣೆಯನ್ನು ಪರಿಹರಿಸುವ ಸದುದ್ದೇಶದಿಂದ ಕೆಲವು ದಿನಗಳ ಹಿಂದೆ ಭಾಲ್ಕಿಯಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜನೆ ಮಾಡಲಾಗಿತ್ತು. ಮೇಳದಲ್ಲಿ ನೊಂದಣಿ ಮಾಡಿಸಿಕೊಂಡ 8,500 ನಿರುದ್ಯೋಗಿ ಯುವಕ, ಯುವತಿಯರ ಪೈಕಿ ಸುಮಾರು 3,700 ಜನರು ಆಫರ್ ಲೇಟರ ಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ಉದ್ಯೋಗ ನೈಪುಣ್ಯತೆಗಾಗಿ ಬೀದರನ ಯುವಕರಿಗೆ ಕೌಶಲ್ಯ ತರಬೇತಿ ಪ್ರಾರಂಭಿಸುವ ಉದ್ದೇಶವಿದೆ ಎಂದರು.
ಇಂದಿನ ಜನ ಸ್ಪಂದನಾ ಕಾರ್ಯಕ್ರಮದಲ್ಲಿ ಜಿಲ್ಲೆಯ ಬಸವಕಲ್ಯಾಣ, ಭಾಲ್ಕಿ, ಔರಾದ, ಹುಮನಾಬಾದ ಸೇರಿದಂತೆ ವಿವಿಧ ತಾಲ್ಲೂಕುಗಳಿಂದ ಸುಮಾರು ಜನರು ತಮ್ಮ ಕುಂದು ಕೊರತೆಗಳನ್ನು ತಂದಿದ್ದರು. ವಿವಿಧ ಇಲಾಖೆಯ ಸ್ಟಾಲ್‌ಗಳಲ್ಲಿ 161 ಅರ್ಜಿ, ನೇರವಾಗಿ ವೇದಿಕೆ ಮೇಲೆ 140 ಅರ್ಜಿಗಳು ಸೇರಿ ಒಟ್ಟು 301 ಅರ್ಜಿಗಳು ಬಂದಿವೆ. ಇನ್ನು ಹೆಚ್ಚಿನ ರೀತಿಯಲ್ಲಿ ಅರ್ಜಿಗಳು ಬರಬೇಕಿತ್ತು, ಅಧಿಕಾರಿಗಳು ಅಲ್ಪ ಕಾಲದಲ್ಲಿಯೇ ಜನಸ್ಪಂದನಾ ಕಾರ್ಯದಲ್ಲಿ ಚುರುಕಾಗಿ ಕೆಲಸ ನಿರ್ವಹಿಸಿದ್ದಾರೆ. ಈ ಎಲ್ಲಾ ಅರ್ಜಿಗಳನ್ನು ಒಂದು ವಾರದಲ್ಲಿ ಅಧಿಕಾರಿಗಳೊಂದಿಗೆ ಕುಳಿತು ಕಾನೂನು ರೀತಿಯಲ್ಲಿ ಅವುಗಳಿಗೆ ಪರಿಹಾರ ನೀಡಲಾಗುವುದು ಮತ್ತು ಪ್ರಥಮ ಜನ ಸ್ಪಂದನಾ ಕಾರ್ಯಕ್ರಮ ಯಶಸ್ವಿಯಾಗಿರುವುದಕ್ಕೆ ಇದರಲ್ಲಿ ಭಾಗವಹಿಸಿದ ಜಿಲ್ಲೆಯ ಎಲ್ಲಾ ಜನತೆಗೆ ಹಾಗೂ ಅಧಿಕಾರಿಗಳಿಗೆ ನನ್ನ ಮತ್ತು ಸರ್ಕಾರದ ವತಿಯಿಂದ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ಪೌರಾಡಳಿ ಹಾಗೂ ಹಜ್ ಖಾತೆ ಸಚಿವ ರಹೀಂ ಖಾನ್ ಮಾತನಾಡಿ, ಈ ಸಭೆಯಲ್ಲಿ ಎಲ್ಲಾ ಅಧಿಕಾರಿಗಳು ಜನರ ಅಹವಾಲಿಗೆ ಹೇಗೆ ಸ್ಪಂದಿಸುತ್ತಾರೋ, ಗೌರವ ನೀಡುತ್ತಾರೋ ಅದೇ ರೀತಿ ನಿಮ್ಮ ಕಚೇರಿಗೆ ಜನರು ಬಂದಾಗ ಅವರಿಗೆ ಸ್ಪಂದಿಸಿದರೆ ಎಲ್ಲ ಸಮಸ್ಯೆಗಳು ಪರಿಹಾರವಾಗುತ್ತವೆ. ಜಿಲ್ಲೆಯಲ್ಲಿ ಈ ಹಿಂದೆ ಇದ್ದ ವ್ಯವಸ್ಥೆ ಇರಬಾರದು. ಅದರಲ್ಲಿ ಬದಲಾವಣೆ ಆಗಬೇಕು. ಜನರ ಅಹವಾಲು ಆಲಿಸಿ, ಅದಕ್ಕೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಕಲಚೇತನರ ಸಮಸ್ಯೆಗಳನ್ನು ಆಲಿಸಲು ವೇದಿಕೆಯಿಂದ ಕೆಳಗೆ ಇಳಿದು ಬಂದ ಈಶ್ವರ ಖಂಡ್ರೆ ಹಾಗೂ ರಹೀಂಖಾನ್ ಅವರು ದಿವ್ಯಾಂಗರಿAದ ಮನವಿ ಪತ್ರ ಸ್ವೀಕರಿಸಿ ವಿಕಲಚೇತನರಿಗೆ ವಸತಿ ಸೌಲಭ್ಯ ಕಲ್ಪಿಸುವುದಾಗಿರಲಿ, ಅವರಿಗೆ ಪಿಂಚಣಿ ಕೊಡಿಸುವುದಾಗಿರಲಿ ಅಥವಾ ವಾಹನ ಕೊಡಿಸುವುದೇ ಆಗಿರಲಿ ಅದನ್ನು ಕೊಡಿಸುವ ಪ್ರಯತ್ನ ಮಾಡಲಾಗುವುದು. ವಿಕಲಚೇತನರಿಗೆ ಉದ್ಯೋಗ ಕಲ್ಪಿಸುವ ಕುರಿತಂತೆ ಸಚಿವ ಸಂಪುಟದಲ್ಲಿ ಚರ್ಚಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಅವರಿಗೆ ಭರವಸೆ ನೀಡಿದರು.
ನಂತರ ವಿವಿಧ ಇಲಾಖೆಗಳ ಸಮಸ್ಯೆಗಳನ್ನು ಆಲಿಸಿದ ಸಚಿವರು ಸಾರ್ವಜನಿಕರ ಸಮಸ್ಯೆ ಆಲಿಸಿ, ಕಾನೂನು ಚೌಕಟ್ಟಿನಲ್ಲಿ ಸಮಸ್ಯೆಗಳಿಗೆ ಪರಿಹರಿಸುವುದಾಗಿ ತಿಳಿಸಿದರು. ಮನೆ ನಿರ್ಮಾಣಕ್ಕಾಗಿ ಸರ್ಕಾರದ ವಸತಿ ಯೋಜನೆಯಡಿ ನೆರವು ಕೋರಿ ಬಂದ ಮಹಿಳೆಯ ಅಹವಾಲು ಆಲಿಸಿದ ಸಚಿವರು ಪಂಚಾಯಿತಿಗೆ ಅರ್ಜಿ ಸಲ್ಲಿಸುವಂತೆ ತಿಳಿಸಿದರು. ಅರ್ಹ ಫಲಾನುಭವಿ ಆಗಿದ್ದಲ್ಲಿ ಮನೆ ನಿರ್ಮಾಣಕ್ಕೆ ಕಾನೂನು ಮಿತಿಯಲ್ಲಿ ಅರ್ಜಿ ಪರಿಶೀಲಿಸಲು ಅಧಿಕಾರಿಗಳಿಗೆ ತಿಳಿಸಿದರು. ಮನೆಯ ಪ್ರವೇಶಕ್ಕೆ ಅಡ್ಡಿಯಾಗಿರುವ ಟ್ರಾನ್ಸ್ ಫಾರ್ಮರ್ ತೆರವು ಮಾಡುವ, ಚರಂಡಿ ನಿರ್ಮಾಣ ಮೊದಲಾದ ಹಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಿದರು.
ಉದ್ಯೋಗ ಕೋರಿ ಹಲವು ಅರ್ಜಿಗಳು ಬಂದ ಹಿನ್ನೆಲೆಯಲ್ಲಿ, ಅರ್ಹತೆಯ ಆಧಾರದ ಮೇಲೆ ಉದ್ಯೋಗ ನೀಡಲಾಗುತ್ತದೆ. ಅದಕ್ಕೆ ಪ್ರಕ್ರಿಯೆ ಇರುತ್ತದೆ. ಹೀಗಾಗಿ ನೇಮಕಾತಿಗೆ ಜಾಹೀರಾತು ಪ್ರಕಟಿಸಿದ ತರುವಾಯ ಅರ್ಜಿ ಸಲ್ಲಿಸುವಂತೆ ತಿಳಿ ಹೇಳಿದರು. ನೂರಾರು ಜನರು ಸರತಿಯ ಸಾಲಿನಲ್ಲಿ ನಿಂತು ಸಚಿವರಿಗೆ ಖುದ್ದಾಗಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ.ಎಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ.ಎಸ್.ಎಲ್, ಬೀದರ ಅರಣ್ಯ ಉಪ ಸಂರಕ್ಷಣಾಧಿಕಾರಿ ವಾನತಿ.ಎಂ.ಎA, ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಜಿಲ್ಲಾ ಹಾಗೂ ತಾಲ್ಲೂಕ ಮಟ್ಟದ ಅಧಿಕಾರಿಗಳು, ವಿವಿಧ ಸಂಘ-ಸAಸ್ಥೆಯ ಮುಂಖಡರು, ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕಿನಿಂದ ಹಾಗೂ ಗ್ರಾಮಗಳಿಂದ ಅಹವಾಲು ನೀಡಲು ಬಂದ ಸಾರ್ವಜನಿಕರು ಉಪಸ್ಥಿತರಿದ್ದರು.