ಚಾಂಬೋಳ ಪ್ರವಚನ ಕಾರ್ಯಕ್ರಮದಲ್ಲಿ ಬಸವಲಿಂಗ ಅವಧೂತರ ಸಲಹೆ ಶರಣ ಮಾರ್ಗ ಬಹಳ ದೊಡ್ಡದು
ಬೀದರ್: ಮನುಷ್ಯ ಜೀವನ ಪಾವನ ಮಾಡಿಕೊಳ್ಳಲು ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕು ಇದು ದೊಡ್ಡ ಸಾಧನ ಮಾರ್ಗವಾಗಿದೆ ಎಂದು ಜಹೀರಾಬಾದ್ ತಾಲ್ಲೂಕಿನ ಮಲ್ಲಯ್ಯಗಿರಿ ಹಾಗೂ ದೇಗಲಮಡಿ ಆಶ್ರಮದ ಪೀಠಾಧಿಪತಿ ಡಾ. ಬಸವಲಿಂಗ ಅವಧೂತರು ಸಲಹೆ ಮಾಡಿದರು.
ಬೀದರ್ ತಾಲ್ಲೂಕಿನ ಚಾಂಬೋಳ್ ಗ್ರಾಮದಲ್ಲಿ ಆಯೋಜಿಸಿದ್ದ ಪ್ರವಚನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಬಸವಾದಿ ಶರಣರು ನಡೆದಾಡಿದ ಭೂಮಿ ಇದಾಗಿದೆ. ಈ ನೆಲದಲ್ಲಿ ಜನಿಸಿದ ನಾವೆಲ್ಲರೂ ಧನ್ಯರು ಎಂದು ನುಡಿದರು.
ನಾಮಗಳು ಬೇರೆ ಬೇರೆ ಇದ್ದರೂ, ದೇವರು ಒಬ್ಬನೇ ಇದ್ದಾನೆ. ದೇವರ ಕೃಪೆಗೆ ಪಾತ್ರರಾಗಲು ಪೂಜೆ, ಧ್ಯಾನ ಮಾಡಬೇಕು. ಸತ್ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ನಿತ್ಯ ಭಕ್ತಿಯಿಂದ ದೇವರ ಪೂಜೆ ಮಾಡಬೇಕು. ಆಧಾತ್ಮದ ಒಲವು ಬೆಳೆಸಿಕೊಳ್ಳಬೇಕು. ಮೂಢನಂಬಿಕೆ, ಮೂಢ ಆಚರಣೆಗಳಿಂದ ದೂರ ಇರಬೇಕು ಎಂದು ತಿಳಿಸಿದರು.
ಹಿರಿಯರನ್ನು ಗೌರವಿಸಬೇಕು. ಜನ್ಮಕೊಟ್ಟ ತಂದೆ-ತಾಯಿಯ ಸೇವೆ ಮಾಡಬೇಕು. ಯಾರೊಂದಿಗೂ ವೈಷಮ್ಯ ಬೆಳೆಸಿಕೊಳ್ಳಬಾರದು. ಪರಸ್ಪರ ಪ್ರೀತಿಯಿಂದ ಕುಟುಂಬದಲ್ಲಿ ಬಾಳಬೇಕು ಎಂದು ಸಲಹೆ ಮಾಡಿದರು.
ಇಂದಿನ ಯುವ ಜನಾಂಗ ಮಾದಕ ವಸ್ತುಗಳ ಚಟಕ್ಕೆ ಬಿದ್ದು ಜೀವನ ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ಚಟಗಳಿಂದ ಆರೋಗ್ಯ ಹಾಳಾಗುತ್ತದೆ ಪೋಷಕರು ಮಕ್ಕಳನ್ನೂ ಪೊಷಿಸಿಕೊಳ್ಳಬೇಕು ಎಂದು ನುಡಿದರು.
ಪ್ರಮುಖರಾದ ಚಂದ್ರಕಾಂತ ಕೋಳಿ, ಸಂಗ್ರಾಮ ಕಾಳೆ, ಮಂಜುನಾಥ ಬೆಂಬಳಗೆ, ಮಾಂತೇಷ ಬ್ಯಾಂಬ್ರೆ, ರಾಜು ಮೇಳೆ, ಕೃಷ್ಣ ಕುಂಬಾರ, ಲಾಲಚಂದ ಕೋಳಿ ಮೊದಲಾದವರು ಪಾಲ್ಗೊಂಡಿದ್ದರು.