ಗೀತಾ ಗಡ್ಡಿ ಸನ್ಮಾನ ಕಾರ್ಯಕ್ರಮ: ರಾಜೇಂದ್ರಕುಮಾರ ಗಂದಗೆ ಹೇಳಿಕೆ ಪ್ರಾಮಾಣಿಕ ಅಧಿಕಾರಿಗಳಿಗೆ ಜನ ಮನ್ನಣೆ
ಬೀದರ್: ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಅಧಿಕಾರಿಗಳು ಹಾಗೂ ನೌಕರರಿಗೆ ಜನ ಮನ್ನಣೆ ದೊರೆಯುತ್ತದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಹೇಳಿದರು.
ವರ್ಗಾವಣೆಯಾದ ಪ್ರಯುಕ್ತ ಬೀದರ್ ತಾಲ್ಲೂಕು ಪಂಚಾಯಿತಿ ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕಿ ಗೀತಾ ಎಸ್. ಗಡ್ಡಿ ಅವರಿಗೆ ಇಲ್ಲಿಯ ರಾಣಿ ಕಿತ್ತೂರು ಚನ್ನಮ್ಮ ವೃತ್ತದ ಬಳಿಯ ಮಹಾಲಕ್ಷ್ಮಿ ಸಭಾಂಗಣದಲ್ಲಿ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗೀತಾ ಗಡ್ಡಿ ಅವರು ಪ್ರಾಮಾಣಿಕತೆ, ದಕ್ಷತೆ ಹಾಗೂ ಸೇವಾ ನಿಷ್ಠೆಗೆ ಹೆಸರಾಗಿದ್ದಾರೆ. ಉತ್ತಮ ಸೇವೆ ಮೂಲಕ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ತಿಳಿಸಿದರು.ರಾಜ್ಯ ಸರ್ಕಾರಿ ನೌಕರರ ಸಂಘ ನೌಕರರ ಹಿತ ರಕ್ಷಣೆಗೆ ಸದಾ ಸಿದ್ಧವಿದೆ ಎಂದು ಹೇಳಿದರು.
ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕಿಯಾಗಿ ಸಲ್ಲಿಸಿದ ಸೇವೆ ತೃಪ್ತಿ ತಂದಿದೆ. ಬೆಮಳಖೇಡದ ಮುಖ್ಯಶಿಕ್ಷಕಿ ಹುದ್ದೆಯಲ್ಲೂ ಉತ್ತಮ ಕೆಲಸ ಮಾಡಲು ಪ್ರಯತ್ನಿಸುವೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಅಖಿಲಾಂಡೇಶ್ವರಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿಯ ಅಕ್ಷರ ದಾಸೋಹ ಯೋಜನೆ ಅಧಿಕಾರಿ ಬಸವಂತರಾಯ ಜಿಡ್ಡೆ, ಪ್ರಭಾರಿ ಶಿಕ್ಷಣ ಸಮನ್ವಯಾಧಿಕಾರಿ ಧನರಾಜ ಗುಡಮೆ, ನಿವೃತ್ತ ಶಿಕ್ಷಣ ಅಧಿಕಾರಿ ಇನಾಯತ್ ರೆಹಮಾನ್ ಸಿಂಧೆ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಂತೋಷ ಚಲುವಾ, ಜಿಲ್ಲಾ ಅನುದಾನಿತ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿಜಯಕುಮಾರ ಪಾಟೀಲ ಯರನಳ್ಳಿ, ಪ್ರಮುಖರಾದ ಸಂಗಶೆಟ್ಟಿ ಹಲಬುರ್ಗೆ, ಭೀಮಣ್ಣ ಹಡಪದ ಮೊದಲಾದವರು ಇದ್ದರು.
ಮುಖ್ಯಶಿಕ್ಷಕಿ ಪ್ರತಿಭಾ ಚಾಮಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಇಂದಿರಾಬಾಯಿ ಗುರುತಪ್ಪ ಶೆಟಕಾರ್ ಪ್ರೌಢಶಾಲೆ ಮುಖ್ಯಶಿಕ್ಷಕ ಲಕ್ಷ್ಮಣ ಪೂಜಾರಿ ಸ್ವಾಗತಿಸಿದರು. ಬಸವರಾಜ ಮೂಲಗೆ ನಿರೂಪಿಸಿದರು. ಜೀಜಾಮಾತಾ ಪ್ರೌಢಶಾಲೆ ಮುಖ್ಯಶಿಕ್ಷಕ ಪರಮೇಶ್ವರ ಬಿರಾದಾರ ವಂದಿಸಿದರು.
ಬೀದರ್ ತಾಲ್ಲೂಕಿನ ಮುಖ್ಯಶಿಕ್ಷಕರು ಹಾಗೂ ಶಿಕ್ಷಕರ ವತಿಯಿಂದ ಕಾರ್ಯಕ್ರಮ ಸಂಘಟಿಸಲಾಗಿತ್ತು.