ಖೇಡ್ ಜಾತ್ರೆ: ಭಕ್ತಾದಿಗಳಿಗೆ ಹೋಳಿಗೆ ತುಪ್ಪ ಬಡಿಸಿದ ಶಾಸಕ ಪ್ರಭು ಚವ್ಹಾಣ
ಕಮಲನಗರ ತಾಲ್ಲೂಕಿನ ಖೇಡ ಗ್ರಾಮದಲ್ಲಿ ಪೂಜ್ಯ ಶ್ರೀ ರೇವಪ್ಪಯ್ಯಾ ಶಿವಶರಣರ ಜಾತ್ರಾ ಮಹೋತ್ಸವದಲ್ಲಿ ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು.ಬಿ ಚವ್ಹಾಣ ಜೂನ್ 25ರಂದು ಭಾಗವಹಿಸಿ, ಭಕ್ತಾದಿಗಳಿಗೆ ಹೋಳಿಗೆ ತುಪ್ಪ ಬಡಿಸಿ ಗಮನ ಸೆಳೆದರು.
ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಈ ವರ್ಷ ಸರಿಯಾಗಿ ಮಳೆ, ಬೆಳೆಯಾಗಿ ರೈತರ ಜೀವನ ಸಮೃದ್ಧಿಯಾಗಲೆಂದು ಮತ್ತು ನಾಡಿನಲ್ಲಿ ಸುಖ, ಶಾಂತಿ ನೆಲೆಸಲೆಂದು ಪ್ರಾರ್ಥನೆ ಸಲ್ಲಿಸಿದರು. ಭಕ್ತಾದಿಗಳಿಗೆ ತಮ್ಮ ಕೈಯಿಂದಲೇ ಹೋಳಿಗೆ ತುಪ್ಪ ಬಡಿಸಿ ನಂತರ ತಾವೂ ಭಕ್ತರೊಂದಿಗೆ ಕುಳಿತು ಪ್ರಸಾದ ಸವಿದರು.
ಇದೇ ವೇಳೆ ತೆಡೋಳಾ- ಮೆಹಕರ್ ಮಠದ ಪೂಜ್ಯ ಶ್ರೀ ರಾಜೇಶ್ವರ ಶಿವಾಚಾರ್ಯರ ಸ್ವಾಮಿಗಳ ಆಶೀರ್ವಾದ ಪಡೆದರು. ನಂತರ ಮಾತನಾಡಿ, ಪವಾಡಪುರುಷ ರೇವಪ್ಪಯ್ಯ ಸ್ವಾಮಿಯ ಜಾತ್ರಾ ಮಹೋತ್ಸವ ಖೇಡ್ ಗ್ರಾಮದಲ್ಲಿ ಪ್ರತಿ ವರ್ಷ ಅದ್ದೂರಿಯಾಗಿ ನಡೆಯುತ್ತಿದೆ. ಸಾಕಷ್ಟು ಭಕ್ತಾದಿಗಳು ಜಾತ್ರೆಗೆ ಆಗಮಿಸಿ ಪುನೀತರಾಗುತ್ತಿದ್ದಾರೆ ಎಂದರು.
ಹಬ್ಬದೂಟವಾಗಿರುವ ಹೋಳಿಗೆ ತುಪ್ಪದ ದಾಸೋಹ ಈ ಜಾತ್ರೆಯ ವೈಶಿಷ್ಟ್ಯವಾಗಿದ್ದು, ಜಾತ್ರೆಯಲ್ಲಿ ಹಬ್ಬದ ವಾತಾವರಣ ಕಂಡುಬರುತ್ತದೆ. ಪವಾಡ ಪುರುಷರಾದ ರೇವಪ್ಪಯ್ಯ ಶರಣರ ಜಾತ್ರೆಯಲ್ಲಿ ಭಾಗವಹಿಸುವುದೇ ನನ್ನ ಸೌಭಾಗ್ಯ ಎಂದರು.
ರೇವಪಯ್ಯ ಸ್ವಾಮಿಯ ಆಶೀರ್ವಾದದಿಂದ ಎಲ್ಲರಿಗೂ ಒಳ್ಳೆಯದಾಗುತ್ತಿದೆ. ನಾನು ಸ್ವಾಮಿಯ ಪರಮ ಭಕ್ತನಾಗಿದ್ದು, ಪ್ರತಿವರ್ಷ ಜಾತ್ರೆಗೆ ಬರುತ್ತೇನೆ. ಪ್ರತಿವರ್ಷ ಮಂದಿರಕ್ಕೆ ಬರುವ ಭಕ್ತರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಅದರಂತೆ ಮಂದಿರ ಅಭಿವೃದ್ಧಿಯಾಗಬೇಕು. ಇದಕ್ಕೆ ನಾನು ಸದಾ ಸಿದ್ದನಿದ್ದೇನೆ. ಮಂದಿರ ಹಾಗೂ ಗ್ರಾಮಕ್ಕೆ ಸಂಬಂಧಿಸಿದ ಎಲ್ಲ ಬೇಡಿಕೆಗಳನ್ನು ಈಡೇರಿಸಲಾಗುವುದೆಂದು ಭರವಸೆ ನೀಡಿದರು.
70 ಲಕ್ಷದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ: ಶಾಸಕರು ಖೇಡ್ ಗ್ರಾಮದಲ್ಲಿ 40 ಲಕ್ಷ ಹಾಗೂ ಕಾಳಗಾಪೂರ ಗ್ರಾಮದಲ್ಲಿ 30 ಲಕ್ಷ ಅನುದಾನದಲ್ಲಿ ಕೈಗೊಂಡಿರುವ ಸಿಸಿ ರಸ್ತೆ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಕೆಲಸ ಗುಣಮಟ್ಟದಿಂದ ಮಾಡಬೇಕೆಂದು ಗುತ್ತಿಗೆದಾರರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಬಸವರಾಜ ಪಾಟೀಲ ಕಮಲನಗರ, ನಾಗೇಶ ಪತ್ರೆ, ಮಲ್ಲಿಕಾರ್ಜುನ ದಾನಾ, ರಾಹುಲ ಪಾಟೀಲ, ಗಿರೀಶ ವಡೆಯರ ಸೇರಿದಂತೆ ಇತರರಿದ್ದರು.