ಬೀದರ್

ಖಾಸಗಿ ಶಾಲೆಗಳ ಜುಲೈ 25 ರಂದು ಬೀದರ ಜಿಲ್ಲಾ ಮಟ್ಟದಲ್ಲಿ ಬೃಹತ್ ಪ್ರತಿಭಟನೆ

ಬೀದರ್: ಜಿಲ್ಲೆಯ ಖಾಸಗಿ ಶಾಲೆಗಳ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟದ ಮಾರ್ಗ ಅನುಸರಿಸಲು ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಸಂಘ ನಿರ್ಧರಿಸಿದೆ.
ನಗರದ ಜನಸೇವಾ ಶಾಲೆಯ ಸಭಾಂಗಣದಲ್ಲಿ ಬುಧವಾರ ನಡೆದ ಸಂಘದ ಜಿಲ್ಲಾಮಟ್ಟದ ಸಭೆಯಲ್ಲಿ ಈ ಕುರಿತು ಒಕ್ಕೊರಲ ನಿರ್ಣಯ ಕೈಗೊಳ್ಳಲಾಯಿತು.
ಆಡಳಿತದ ಗಮನ ಸೆಳೆಯಲು ಮೊದಲ ಹಂತದಲ್ಲಿ ಜುಲೈ 25 ರಂದು ಜಿಲ್ಲಾ ಮಟ್ಟದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು. ನಂತರ ಹಂತ ಹಂತವಾಗಿ ಹೋರಾಟ ಮಾಡಲಾಗುವುದು ಎಂದು ನೇತೃತ್ವ ವಹಿಸಿದ್ದ ಸಂಘದ ಗೌರವಾಧ್ಯಕ್ಷ ರೇವಸಿದ್ದಪ್ಪ ಜಲಾದೆ ತಿಳಿಸಿದರು.
ಸರ್ಕಾರದ ಬಿಗಿ ನಿಯಮಗಳಿಂದಾಗಿ ಪ್ರಸ್ತುತ ಖಾಸಗಿ ಶಾಲೆಗಳನ್ನು ನಡೆಸುವುದೇ ಕಷ್ಟಕರವಾಗಿದೆ. ಅನುದಾನಕ್ಕೆ ಒಳಪಡಿಸದ ಕಾರಣ ಆರ್ಥಿಕ ಸಮಸ್ಯೆ ಮಧ್ಯೆಯೇ ನಡೆಸಿಕೊಂಡು ಬರುತ್ತಿರುವ ಶಾಲೆಗಳು ಸಂಕಷ್ಟದಲ್ಲಿವೆ ಎಂದು ಹೇಳಿದರು.
ಕನ್ನಡ ಶಾಲೆಗಳ ಸಬಲೀಕರಣ ಕಾಯ್ದೆ ಜಾರಿಗೆ ತರಬೇಕು. ಪರವಾನಗಿ ನವೀಕರಣ ಸರಳೀಕರಿಸಬೇಕು. ಬಡ ಮಕ್ಕಳ ಶಿಕ್ಷಣಕ್ಕೆ ಆಸರೆಯಾಗಿದ್ದ ಆರ್.ಟಿ.ಇ. ಮರು ಜಾರಿಗೊಳಿಸಬೇಕು. 20 ರಿಂದ 25 ವರ್ಷಗಳಿಂದ ನಡೆಸುತ್ತಿರುವ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಬೇಕು. ಅನುದಾನಿತ, ಶಾಲಾ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಸರ್ಕಾರದ ಅನುಮತಿ ಇಲ್ಲದೆ ನಡೆಸುತ್ತಿರುವ ಕೋಚಿಂಗ್ ಸೆಂಟರ್‍ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಶಿಕ್ಷಣ ಕ್ಷೇತ್ರ ಹಾಗೂ ಖಾಸಗಿ ಶಾಲೆಗಳ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಂಘಟಿತ ಹೋರಾಟ ಅಗತ್ಯವಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರ ಮಣಗೀರೆ ಹೇಳಿದರು.
ಬರುವ ದಿನಗಳಲ್ಲಿ ಜಿಲ್ಲೆಯ ಪ್ರತಿ ತಾಲ್ಲೂಕುಗಳಲ್ಲೂ ಸಂಘದ ಸಂಘಟನೆ ಬಲಪಡಿಸಲಾಗುವುದು ಎಂದು ತಿಳಿಸಿದರು.
ಸಂಘದ ಜಿಲ್ಲಾ ಘಟಕದ ಸಂಘಟನಾ ಕಾರ್ಯದರ್ಶಿಯಾಗಿ ಮಹಮ್ಮದ್ ಸಲಾಹೊದ್ದಿನ್ ಫರಾಹ ಅವರನ್ನು ಆಯ್ಕೆ ಮಾಡಲಾಯಿತು.
ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಗುರುನಾಥ ರೆಡ್ಡಿ, ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ಸಂದೀಪ್ ಶೆಟಕಾರ್, ಬೀದರ್ ದಕ್ಷಿಣ ಘಟಕದ ಅಧ್ಯಕ್ಷ ಸೈಯದ್ ಅಹಮ್ಮದ್, ಔರಾದ್ ತಾಲ್ಲೂಕು ಘಟಕದ ಅಧ್ಯಕ್ಷ ಸಂಜುಕುಮಾರ ಶೆಟಕಾರ್, ಕಮಲನಗರ ತಾಲ್ಲೂಕು ಘಟಕದ ಅಧ್ಯಕ್ಷ ಸಂಜು ಕಂಠಾಣೆ, ಬಸವಕಲ್ಯಾಣ ತಾಲ್ಲೂಕು ಘಟಕದ ಅಧ್ಯಕ್ಷ ಧನರಾಜ ದೊಡ್ಡಮನಿ, ಹುಮನಾಬಾದ್ ತಾಲ್ಲೂಕು ಘಟಕದ ಅಧ್ಯಕ್ಷ ಸುರೇಂದ್ರ ಹುಡಗಿಕರ್, ವಿದ್ಯಾಭಾರತಿ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ. ಎಸ್.ಬಿ. ಸಜ್ಜನಶೆಟ್ಟಿ, ಬಸವತೀರ್ಥ ವಿದ್ಯಾಪೀಠದ ಗುಂಡಯ್ಯ ತೀರ್ಥ, ವಿಶ್ವನಾಥ ಮಾಡಗೋಳ್, ಸುರೇಶ ಪಾಟೀಲ ಮತ್ತಿತರರು ಇದ್ದರು.

Ghantepatrike kannada daily news Paper

Leave a Reply

error: Content is protected !!