ಕೆನರಾ ವಿದ್ಯಾಜ್ಯೋತಿ ಯೋಜನೆಗೆ ಎಕಲಾರ ಮಕ್ಕಳು ಆಯ್ಕೆ
ಔರಾದ್ : ಬಡ ಹಾಗೂ ಪ್ರತಿಭಾವಂತ ಹೆಣ್ಣುಮಕ್ಕಳಿಗೆ ಶೈಕ್ಷಣಿಕವಾಗಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಜಾರಿಗೆ ತಂದಿರುವ ಕೆನರಾ ವಿದ್ಯಾ ಜ್ಯೋತಿ ಯೋಜನೆಗೆ ತಾಲೂಕಿನ ಎಕಲಾರ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಯನಗುಂದಾ ಸರ್ಕಾರಿ ಪ್ರೌಢಶಾಲೆಯ ಆರು ವಿದ್ಯಾರ್ಥಿನಿಯರು ಆಯ್ಕೆಯಾಗಿದ್ದಾರೆ ಎಂದು ಔರಾದ್ ಕೆನರಾ ಬ್ಯಾಂಕ್ ವ್ಯವಸ್ಥಾಪಕ ಮಾಳವಂತ ಅಮೃತಲಾಲ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಅವರು, 2023-24ನೇ ಶೈಕ್ಷಣಿಕ ಸಾಲಿಗೆ 5ರಿಂದ 10ನೇ ತರಗತಿವರೆಗೂ ಓದಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಗ್ರಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿನಿಯರನ್ನು ಆಯ್ಕೆ ಮಾಡಿ ಶೈಕ್ಷಣಿಕವಾಗಿ ಪ್ರೋತ್ಸಾಹಿಸುವ ಯೋಜನೆ ಇದಾಗಿದೆ.
ಗ್ರಾಮೀಣ ಪ್ರದೇಶದಲ್ಲಿ ಅದರಲ್ಲೂ ಸರ್ಕಾರಿ ಶಾಲೆಗಳಲ್ಲಿನ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸಲು ನಿರ್ದೇಶನ ನೀಡಲಾಗಿತ್ತು. ಎಕಲಾರ ಸರ್ಕಾರಿ ಪ್ರಾಥಮಿಕ ಶಾಲೆಯ ಸಾಧನಾ ಬಾಬುಗೊಂಡ್, ಅಕ್ಷರಾ ಚಂದ್ರಕಾಂತ, ಮಧು ಮೋಜೆಸ್ ಹಾಗೂ ಯನಗುಂದಾ ಪ್ರೌಢಶಾಲೆಯ ಸುಹಾನಾ ಸಂಜುಕುಮಾರ್, ನಾಗೇಶ್ವರಿ ಸುಭಾಶ, ಭಾಗ್ಯಶ್ರೀ ರಾಜಕುಮಾರ್ ಈ ಪ್ರತಿಭಾವಂತ ಮಕ್ಕಳನ್ನು ಆಯ್ಕೆ ಮಾಡಿದ್ದು, 15 ಆಗಸ್ಟ್ 2024 ರಂದು ಪ್ರಾಥಮಿಕ ವಿಭಾಗದ ಮಕ್ಕಳಿಗೆ ತಲಾ 3ಸಾವಿರ ಹಾಗೂ ಪ್ರೌಢಶಾಲಾ ವಿಭಾಗದ ಮಕ್ಕಳಿಗೆ ತಲಾ 5ಸಾವಿರ ಪ್ರೋತ್ಸಾಹದಾಯಕ ಹಣ ಜಮಾ ಮಾಡಲಾಗುವುದು ಎಂದರು.
ಮಕ್ಕಳ ಆಯ್ಕೆಯಾದ ಸಂಬಂಧ ಎಕಲಾರ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಪ್ರಭು ಬಾಳೂರೆ, ಬಾಲಾಜಿ ಅಮರವಾಡಿ, ಜೈಸಿಂಗ್ ಠಾಕೂರ, ಅಂಕುಶ ಹಾಗೂ ಯನಗುಂದಾ ಪ್ರೌಢಶಾಲೆಯ ಮುಖ್ಯಶಿಕ್ಷಕ ಓಂಕಾರ ರೋಗನ್, ಮಲ್ಲಿಕಾರ್ಜುನ ಟಂಕಸಾಲೆ, ಲಕ್ಷ್ಮಣರೆಡ್ಡಿ, ಪಾಲಕರು, ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.