ಕಾಸರಗೋಡು ದತ್ತಿ ನಿಧಿ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಜೋಶಿ ಆಯ್ಕೆ
ಬೀದರ್: ಕರ್ನಾಟಕÀ ಗಡಿಯಲ್ಲಿರುವ ಕೇರಳದ ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲುಜೆ) ನೀಡುವ 2024ನೇ ಸಾಲಿನ ಪ್ರತಿಷ್ಠಿತ ದತ್ತಿ ನಿಧಿ ಪ್ರಶಸ್ತಿಗೆ ಬೀದರ್ ಜಿಲ್ಲೆಯ ಹಿರಿಯ ಪತ್ರಕರ್ತ ಸದಾನಂದ ಜೋಶಿ ಆಯ್ಕೆಯಾಗಿದ್ದಾರೆ.
ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಿಂದ ಕಾಸರಗೋಡು ಸೀತಾಂಗೋಳಿಯ ಅಲಯನ್ಸ್ ಕನ್ವೆನ್ಷನ್ ಸಭಾಂಗಣದಲ್ಲಿ ಜುಲೈ 13ರಂದು ಬೆಳಿಗ್ಗೆ 10ಕ್ಕೆ ನಡೆಯಲಿರುವ ದತ್ತಿನಿಧಿ ಪ್ರಶಸ್ತಿ ಪ್ರದಾನ ಹಾಗೂ ಸಂಸ್ಕøತಿ ಉತ್ಸವ ಸಮಾರಂಭದಲ್ಲಿ ಸದಾನಂದ ಜೋಶಿ ಸೇರಿದಂತೆ ನಾಡಿನ 14 ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುತ್ತಿದೆ ಎಂದು ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಸಂಜೀವಕುಮಾರ ಅತಿವಾಳೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಸರಗೋಡಿನಲ್ಲಿ ದತ್ತಿ ನಿಧಿ ಪ್ರಶಸ್ತಿ ಪ್ರದಾನ ಜೊತೆಗೆ ಪ್ರತಿವರ್ಷ ಕನ್ನಡ ಮತ್ತು ಸಂಸ್ಕೃತಿ ಉತ್ಸವ ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ. ಎರಡು ರಾಜ್ಯಗಳ ಕಲೆ, ಸಾಹಿತ್ಯ, ಸಾಂಸ್ಕೃತಿಕ ವೈಭವದ ಆದಾನ-ಪ್ರದಾನ ಕಾರ್ಯಕ್ರಮ ಸಹ ಇದಾಗಿದೆ. ಸದಾನಂದ ಜೋಶಿ ಅವರಿಗೆ ನವಿಮುಂಬಯಿನ ಧರ್ಮದರ್ಶಿ ಅಣ್ಣಿ ಸಿ.ಶೆಟ್ಟಿ ದತ್ತಿನಿಧಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ನಾಡಿನ ಖ್ಯಾತ ಪತ್ರಕರ್ತರಾದ ವಿಶ್ವೇಶ್ವರ ಭಟ್ , ಚೇತನಾ ಬೆಳಗೇರೆ ಸೇರಿದಂತೆ ಒಟ್ಟು 14 ಸಾಧಕರಿಗೆ ದತ್ತಿ ನಿಧಿ ಪ್ರಶಸ್ತಿ ನೀಡಲಾಗುತ್ತಿದೆ. ಜೋಶಿ ಅವರು ಕಳೆದ ಮೂರು ದಶಕಗಳಿಂದ ಪತ್ರಿಕಾ ರಂಗದ ಮೂಲಕ ಸಮಾಜಕ್ಕೆ ಸಲ್ಲಿಸುತ್ತಿರುವ ವಿಶಿಷ್ಟ ಸೇವೆಯಿಂದಾಗಿ ನಮ್ಮ ಭಾಗದಿಂದ ಈ ಪ್ರಶಸ್ತಿಗೆ ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದು ಹೇಳಿದ್ದಾರೆ.
ಸದಾನಂದ ಜೋಶಿ ಅವರು ಮೂಲತಃ ಬೀದರ್ ಸಮೀಪದ ಜನವಾಡಾ ಗ್ರಾಮದವರು. 1994ರಲ್ಲಿ ಉತ್ತರ ಕರ್ನಾಟಕ ಪತ್ರಿಕೆಯ ಮೂಲಕ ಮಾಧ್ಯಮ ಕ್ಷೇತ್ರಕ್ಕೆ ಕಾಲಿಟ್ಟರು. 1999ರಿಂದ 2012ರವೆರೆಗೆ ವಿಜಯ ಕರ್ನಾಟಕ ಪತ್ರಿಕೆ ಜಿಲ್ಲಾ ಹಿರಿಯ ವರದಿಗಾರರಾಗಿ ಕಾರ್ಯನಿರ್ವಹಿಸಿದರು. 2012ರಿಂದ 2021ರವರೆಗೆ ವಿಜಯವಾಣಿ ಜಿಲ್ಲಾ ಹಿರಿಯ ವರದಿಗಾರರಾಗಿ ಕೆಲಸ ಮಾಡಿದರು. ಪದೋನ್ನತಿ ಹೊಂದಿ ಎರಡೂವರೆ ವರ್ಷ ವಿಜಯವಾಣಿ ಕಲಬುರಗಿ ಆವೃತ್ತಿ ಬ್ಯೂರೋ ಚೀಫ್ ಆಗಿ ಕೆಲಸ ಮಾಡಿದರು. 2024ರ ಫೆಬ್ರವರಿವರಿಯಲ್ಲಿ ವಿಜಯವಾಣಿಯಿಂದ ಸ್ವಯಂ ನಿವೃತ್ತಿ ಪಡೆದ ಜೋಶಿ ಅವರು ತಮ್ಮದೇ ಡಿಜಿಟಲ್ ಮೀಡಿಯಾ ಆರಂಭಿಸಿ ತಮ್ಮ ಅಭಿವೃದ್ಧಿಪರ ವಿಚಾರ ಜನರ ಮುಂದಿಡುತ್ತಿದ್ದಾರೆ. ಪ್ರಖರ ಲೇಖನಗಳ ಮೂಲಕ ಈ ಭಾಗದ ಅನೇಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತ, ಅವುಗಳಿಗೆ ಪರಿಹಾರ ಕಲ್ಪಿಸುವ ಕಾರ್ಯ ನಿರಂತರ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್, ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್, ಕೇಂದ್ರ ಸಚಿವ ಜೋ??9 ಕುರ್ಯನ್, ಅರಣ್ಯ ಸಚಿವ ಈಶ್ವರ ಖಂಡ್ರೆ, ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ಕೆಯುಡಬ್ಲುಜೆ ರಾಜ್ಯ ಅಧ್ಯಕ್ಷ ಶಿವಾನಂದ ತಗಡೂರು, ಕಾಸರಗೋಡು ಕೆಯುಡಬ್ಲುಜೆ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಪತ್ರಕರ್ತರು, ಕನ್ನಡಾಭಿಮಾನಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅತಿವಾಳೆ ಮನವಿ ಮಾಡಿದ್ದಾರೆ.