ಕಾನೂನು ವಿದ್ಯಾರ್ಥಿಗಳು ಕ್ರಿಯಾತ್ಮಕವಾಗಿ ಭಾಗವಹಿಸಬೇಕು-ನ್ಯಾ.ಸಿದ್ರಾಮಪ್ಪ ಕನಕಟ್ಟೆ
ಬೀದರ, ಅಗಸ್ಟ್ 25 – ಕಾನೂನು ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮದಲ್ಲಿ ಕ್ರಿಯಾತ್ಮಕವಾಗಿ ಭಾಗವಹಿಸುವ ಮೂಲಕ ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಿದ್ರಾಮಪ್ಪ ಕನಕಟ್ಟೆ ಹೇಳಿದರು.
ಅವರು ಶುಕ್ತವಾರ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಹುಬ್ಬಳ್ಳಿ ಹಾಗೂ ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಆರ್.ವಿ.ಬಿಡಪ್ ಕಾನೂನು ಮಹಾವಿದ್ಯಾಲಯ ಬೀದರ ಇವರ ಸಂಯುಕ್ತಾಶ್ರಯದಲ್ಲಿ ಕಮಠಾಣ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ 2022-23ನೇ ಶೈಕ್ಷಣಿಕ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ಕಲಿಯಲು ಇದೊಂದು ಸದಾವಕಾಶವಿದ್ದಂತೆ, ನಮ್ಮ ಭಾಗದಲ್ಲಿ ಮಾರ್ಚದಿಂದ ಮೇ ವರೆಗೆ ಹೆಚ್ಚು ಬಿಸಿಲು ಇರುತ್ತದೆ ಹಾಗಾಗಿ ಎಲ್ಲಾ ಎನ್.ಎಸ್.ಎಸ್.ಶಿಬಿರಾರ್ಥಿಗಳು ಕಮಠಾಣದ ಪ್ರತಿ ಮನೆಯ ಮುಂದುಗಡೆ ಒಂದೊಂದು ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಿಸುವ ಜವಾಬ್ದಾರಿ ಆಯಾ ಮನೆಯವರೆಗೆ ನೀಡಬೇಕು. ಏಳು ದಿನಗಳ ಈ ಎನ್.ಎಸ್.ಎಸ್.ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಬಿ.ಜಿ.ಶೆಟಕಾರ ಅವರು ಮಾತನಾಡಿ, ವಕೀಲರಾದವರು ಮಾತನಾಡದವರಿಗೆ ಮಾತನಾಡಿಸಬೇಕು, ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮದಲ್ಲಿ ಒಳ್ಳೆ ಒಳ್ಳೆ ಉಪನ್ಯಾಸಕರನ್ನು ಕರೆಯಿಸಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಈ ಕಾರ್ಯಕ್ರಮದಲ್ಲಿ ಕೇವಲ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಭಾಗವಹಿಸದೆ ಕಮಠಾಣ ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಸದಸ್ಯರು ಭಾಗವಹಿಸಿರುವುದು ಸಂತಸದ ವಿಷಯವಾಗಿದೆ. ಮಕ್ಕಳಲ್ಲಿ ಶಿಸ್ತು ಬಂದಾಗ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಕಮಠಾಣ ಗ್ರಾಮ ಪಂಚಾಯತ ಅಧ್ಯಕ್ಷ ರವಿಕುಮಾರ ಶಂಕರ ನಡುವಿನದೊಡ್ಡಿ, ಸಿಪಿಐ ಮಲ್ಲಿಕಾರ್ಜುನ ಯಾತನೂರ, ಜಿಲ್ಲಾ ವಾರ್ತಾಧಿಕಾರಿ ಜಿ.ಸುರೇಶ, ಸತೀಶ ಪಾಟೀಲ ಮಾತನಾಡಿದರು.
ಈ ಸಂದರ್ಭದಲ್ಲಿ ಕಮಠಾಣ ಗ್ರಾಮ ಪಂಚಾಯತ ಉಪಾಧ್ಯಕ್ಷ ಯಾಸ್ಮೀನ ಬೇಗಂ, ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಬೀದರ ತಾಲೂಕ ಪಂಚಾಯತ ಸದಸ್ಯ ಮಹ್ಮದ ಗೌಸೋದ್ದಿನ್, ಕಮಠಾಣ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಶಶಿ ಕಪ್ಪೂರ, ಕಮಠಾಣ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರತಿಭಾ ಡಿ., ಬೀದರ ಆರ್.ವಿ.ಬಿಡಪ್ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯರ ಟಿ. ಮುನಿಯಪ್ಪ, ಸಹಾಯಕ ಪ್ರಾಧ್ಯಾಪಕರಾದ ಡಾ.ಗಣಪತಿ ಟಿ., ಜಯಶ್ರೀ ಪಾಟೀಲ, ಡಾ. ಜೈ ಸಂತೋಷಿಮಾ ಸೇರಿದಂತೆ ಕಾನೂನು ಮಹಾವಿದ್ಯಾಲಯ, ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ ಇತರರು ಉಪಸ್ಥಿತರಿದ್ದರು.