ಬೀದರ್

ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದಿಂದ ಮನವಿ

ಅನುದಾನಿತ ಶಾಲಾ ಕಾಲೇಜುಗಳ ನೌಕರರ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರಾದ ವಿಜಯಕುಮಾರ ಪಾಟೀಲ ಯರನಳ್ಳಿ ನೇತೃತ್ವದಲ್ಲಿ ರಾಜ್ಯದ ಮುಖ್ಯಮಂತ್ರಿಗೆ ಬೀದರ ತಹಸೀಲ್ದಾರ ಮೂಲಕ ಮನವಿ ಸಲ್ಲಿಸಲಾಯಿತು.
ರಾಜ್ಯ ಸರಕಾರವು ಈಗಾಗಲೇ ರಾಜ್ಯ ಸರಕಾರಿ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಹೊಸ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವ ಆದೇಶ ಹೊರಬಿದ್ದು ಶೀಘ್ರ ಅದನ್ನು ಜಾರಿಗೊಳಿಸಬೇಕು. ಪ್ರಾಧಿಕಾರದ ವಂತಿಗೆಯನ್ನು ಆಡಳಿತ ಮಂಡಳಿಗಳ ಬದಲಾಗಿ ಸರಕಾರವು ಭರಿಸಲು ಕ್ರಮ ವಹಿಸಬೇಕು. ಸಿಬ್ಬಂದಿಗಳ ವೇತನ ನಿವೃತ್ತಿ ಮತ್ತು ಇತರ ಸೌಲಭ್ಯಗಳಿಗೆ ಸಂಬಂಧಿಸಿದ ವಿಧೇಯಕ್ಕೆ ತಿದ್ದುಪಡಿ ತಂದು ಅಥವಾ ರದ್ದು ಪಡಿಸಿ ಭವಿಷ್ಯಾವರ್ತಿಯಾಗಿ ಜಾರಿಗೆ ಬರುವಂತೆ ಕ್ರಮವಹಿಸಬೇಕು.
ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ದಶಕಗಳಿಂದ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಶೀಘ್ರ ಕ್ರಮ ಕೈಗೊಳ್ಳಬೇಕು. ಅನುದಾನಿತ ನೌಕರರಿಗೂ ಕೂಡ ಸರಕಾರಿ ನೌಕರರಂತೆ ಜ್ಯೋತಿ ಸಂಜೀವಿನಿ ಯೋಜನೆಗೆ ಒಳಪಡಿಸಬೇಕು.
ಸರಕಾರಿ ಶಾಲಾ ಕಾಲೇಜುಗಳು ಮತ್ತು ಅನುದಾನಿತ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗಾಗಲಿ ಮತ್ತು ನೌಕರರಾಗಲಿ ಯಾವುದೇ ತಾರತಮ್ಯ ಮಾಡಬಾರದು.
ಸರಕಾರ ರಚನೆಗೊಂಡು ವರ್ಷ ಕಳೆದರೂ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಹಳೆ ಪಿಂಚಣಿ ಯೋಜನೆ ಇನ್ನೂ ಜಾರಿಗೊಂಡಿಲ್ಲ. ಹಳೇ ಪಿಂಚಣಿ ಯೋಜನೆ ಶೀಘ್ರ ಜಾರಿಗೊಳಿಸದಿದ್ದರೆ ಮತ್ತೆ ಪ್ರತಿಭಟನೆ ಹೋರಾಟಕ್ಕೆ ಇಳಿಯಬೇಕಾಗುತ್ತದೆ. ನೌಕರರ ನ್ಯಾಯಯುತ ಬೇಡಿಕೆಗಳನ್ನು ಶೀಘ್ರ ಈಡೇರಿಸುವಂತೆ ಈ ಮೂಲಕ ಅನಿದಾನಿತ ಶಾಲಾ ಕಾಲೇಜುಗಳ ನೌಕರರ ಪಿಂಚಣಿ ಸಂಘದ ಉಪಾಧ್ಯಕ್ಷರಾದ ವಿಜಯಕುಮಾರ ಪಾಟೀಲ ಯರನಳ್ಳಿ ಮತ್ತು ಸದಸ್ಯರ ನಿಯೋಗ ಬೀದರ ತಹಸೀಲ್ದಾರ ಮೂಲಕ ಆಗ್ರಹಿಸಿದ್ದಾರೆ.
ಈ ಸಂಧರ್ಭದಲ್ಲಿ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ಪ್ರಮುಖರಾದ ಉಮೇಶ ಪಾಟೀಲ, ಪ್ರಹ್ಲಾದ್ ತಳಘಟಕರ್, ಬಳಿರಾಮ ಕುಸನಾಳೆ, ಲಕ್ಷ್ಮಣ್ ಪೂಜಾರಿ, ಗಣೇಶ ಬಿರಾದರ, ಬಾಲಾಜಿ ಫುಲೆ, ಗೋಪಾಲ ಕುಲಕರ್ಣಿ, ಅರಶಿಯಾ ಜಮೀನ್ ಡಾ. ಹನೀಫ್, ಪರಮೇಶ್ವರ ಬಿರಾದರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Ghantepatrike kannada daily news Paper

Leave a Reply

error: Content is protected !!