ಕಮಲನಗರ ಸರ್ವಾಂಗೀಣ ಅಭಿವೃದ್ಧಿಗೆ ಪಣ: ಪ್ರಭು ಚವ್ಹಾಣ
ಕಮಲನಗರ ತಾಲ್ಲೂಕನ್ನು ಎಲ್ಲ ರಂಗಗಳಿಂದಲೂ ಪ್ರಗತಿ ಸಾಧಿಸಲು ಪಣ ತೊಟ್ಟಿದ್ದು, ಅದರಂತೆ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುವುದೆಂದು ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ತಿಳಿಸಿದರು.
ಕಮಲನಗರ ತಹಸೀಲ್ ಕಛೇರಿ ಆವರಣದಲ್ಲಿ ಆ.30ರಂದು ಜರುಗಿದ ಕಾರ್ಯಕ್ರಮದಲ್ಲಿ 2023ನೇ ಸಾಲಿನ ಮನೆ ಹಾನಿ ಫಲಾನುಭವಿಗಳಿಗೆ ತಿಳುವಳಿಕೆ ಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ ಎಲ್ಲ ಸರ್ಕಾರಿ ಕಛೇರಿಗಳನ್ನು ತರಬೇಕಿದೆ. ಶೈಕ್ಷಣಿಕವಾಗಿ, ಆರ್ಥಿಕವಾಗಿ ಇನ್ನಷ್ಟು ಪ್ರಗತಿ ಸಾಧಿಸಬೇಕಿದೆ. ಈ ದಿಶೆಯಲ್ಲಿ ಪ್ರಮಾಣಿಕವಾದ ಪ್ರಯತ್ನಗಳು ನಡೆಸುತ್ತಿದ್ದೇನೆ. ಅಧಿಕಾರಿಗಳು ಕೂಡ ಇದಕ್ಕೆ ಸಹಕಾರ ನೀಡಬೇಕು. ಕಾರ್ಯ ನಿಮಿತ್ತ ಕಛೇರಿಗೆ ಆಗಮಿಸುವ ಸಾರ್ವಜನಿಕರಿಗೆ ಸ್ಪಂದಿಸಬೇಕು. ಕಾಲಮಿತಿಯಲ್ಲಿ ಕೆಲಸ ಮಾಡಿಕೊಡಬೇಕು ಎಂದು ನಿರ್ದೇಶನ ನೀಡಿದರು.
ಪ್ರಸಕ್ತ ಮಳೆಗಾಲದ ಆರಂಭದಲ್ಲಿ ಸುರಿದ ಅಪಾರ ಪ್ರಮಾಣದ ಮಳೆಯಿಂದಾಗಿ ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕಿನಲ್ಲಿ ಹಲವು ಮನೆಗಳು ಹಾನಿಯಾಗಿವೆ. ಈಗಾಗಲೇ ಔರಾದ ತಾಲ್ಲೂಕಿನ 104 ಫಲಾನುಭವಿಗಳಿಗೆ ತಿಳುವಳಿಕೆ ಪತ್ರಗಳನ್ನು ವಿತರಿಸಲಾಗಿದೆ. ಇದೀಗ ಕಮಲನಗರ ತಾಲ್ಲೂಕಿನಲ್ಲಿ 36 ಫಲಾನುಭವಿಗಳಿಗೆ ಹಣ ಮಂಜೂರಾಗಿದೆ. ಶೀಘ್ರದಲ್ಲೇ ಹಣ ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆಯಾಗಲಿದೆ. ಇದರ ಸದುಪಯೋಗ ಪಡೆಯಬೇಕು. ಮನೆ ದುರಸ್ಥಿ ಮಾಡಿರುವ ಬಗ್ಗೆ ಮಾಹಿತಿ ನೀಡಬೇಕೆಂದು ಹೇಳಿದರು.
ಪ್ರಸಕ್ತ ತಿಂಗಳಿನಲ್ಲಿ ತೀವ್ರ ಮಳೆಯ ಅಭಾವವಾಗಿರುವದರಿಂದ ಬೆಳೆಗಳು ಹಾನಿಯಾಗಿವೆ. ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕುಗಳನ್ನು ಬರ ಪೀಡಿತ ಪ್ರದೇಶಗಳೆಂದು ಘೋಷಿಸಿ ಪರಿಹಾರ ಬಿಡುಗಡೆ ಮಾಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಲಾಗಿದೆ. ಬೆಂಗಳೂರಿನಲ್ಲಿ ಸಂಬಂಧಪಟ್ಟವರನ್ನು ಭೇಟಿಯಾಗಿ ಕ್ಷೇತ್ರದಲ್ಲಾಗಿರುವ ಬೆಳೆ ಹಾನಿಯ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು ಎಂದರು.
ಅಧಿಕಾರಿಗಳಿಗೆ ತರಾಟೆ: ಕಮಲನಗಕ್ಕೆ ಭೇಟಿ ನೀಡಿದಾಗ ರಸ್ತೆಬದಿ ಹಾಗೂ ಅಲ್ಲಲ್ಲಿ ಸುರಿದ ಕಸವನ್ನು ಕಂಡ ಶಾಸಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಎಲ್ಲ ಗ್ರಾಮ ಪಂಚಾಯಿತಿಗಳನ್ನು ಶುಚಿಯಾಗಿಡುವಂತೆ ತಾಪಂ ಇಓಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಆಡಳಿತ ವ್ಯವಸ್ಥೆ ಸುಧಾರಿಸುವಂತೆ ತಹಸೀಲ್ದಾರರರಿಗೆ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಕಮಲನಗರ
ತಹಸೀಲ್ದಾರ ಅಮಿತ ಕುಲಕರ್ಣಿ, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ ಪಾಟೀಲ ಹಾಗೂ ವಿವಿಧ ಇಲಾಖೆಗಳ ತಾಲ್ಲೂಕು ಅಧಿಕಾರಿಗಳು ಉಪಸ್ಥಿತರಿದ್ದರು.