ಬೀದರ್

ಕಮಲನಗರ ಆಸ್ಪತ್ರೆಗೆ ಶಾಸಕ ಪ್ರಭು ಚವ್ಹಾಣ ಭೇಟಿ-ತಾರಟೆ

ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಜೂನ್ 16ರಂದು ಕಮಲನಗರ ಸರ್ಕಾರಿ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ವೈದ್ಯರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಆಸ್ಪತ್ರೆಯಲ್ಲಿರುವ ವೈದ್ಯರ ಪೈಕಿ ಕೆಲವರು ಮಾತ್ರ ಹಾಜರಿರುವುದನ್ನು ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯನ್ನು ದೂರವಾಣಿ ಮುಖಾಂತರ ಸಂಪರ್ಕಿಸಿ ಅನಧಿಕೃತವಾಗಿ ಗೈರಾಗುತ್ತಿರುವ ವೈದ್ಯರು ಮತ್ತು ಸಿಬ್ಬಂದಿಯ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಸೂಚಿಸಿದರು.
ನಂತರ ಆಸ್ಪತ್ರೆಯ ವಿವಿಧ ವಾರ್ಡ್ಗಳಲ್ಲಿ ಸಂಚರಿಸಿ, ರೋಗಿಗಳ ಆರೋಗ್ಯ ವಿಚಾರಿಸಿದರು. ಆಸ್ಪತ್ರೆಗೆ ಬರುವ ಎಲ್ಲ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಕಲ್ಪಿಸಬೇಕು. ಔಷಧದ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಸರ್ಕಾರಿ ಆಸ್ಪತ್ರೆಗೆ ಬಡ ಜನತೆ ಬರುವುದರಿಂದ ಅವರೊಂದಿಗೆ ಎಲ್ಲ ಸಿಬ್ಬಂದಿಗಳು ಸೌಜನ್ಯತೆಯಿಂದ ವ್ಯವಹರಿಸಬೇಕೆಂದು. ಅವರಿಗೆ ಯಾವುದೇ ರೀತಿಯ ಸಮಸ್ಯೆಗಳಾಗದಂತೆ ನೋಡಿಕೊಳ್ಳಬೇಕೆಂದು ತಿಳಿಸಿದರು.

ಇದೇ ವೇಳೆ ಆಸ್ಪತ್ರೆಯಲ್ಲಿರುವ ವೈದ್ಯರು ಮತ್ತು ಸಿಬ್ಬಂದಿಗಳೆಷ್ಟು ?, ಎಷ್ಟು ಬೆಡ್‌ಗಳಿವೆ ಮತ್ತು ರೋಗಿಗಳ ಸಂಖ್ಯೆಯೆಷ್ಟು ? ಎಷ್ಟು ಜನ ಚಿಕಿತ್ಸೆ ಪಡೆಯುತ್ತಿದ್ದಾರೆ ?, ಔಷಧ ಲಭ್ಯತೆ ಹೀಗೆ ನಾನಾ ರೀತಿಯ ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದುಕೊಂಡರು. ಎಕ್ಸರೇ ವಿಭಾಗದಲ್ಲಿ ತಜ್ಞರು ಲಭ್ಯವಿಲ್ಲದಿರುವುದನ್ನು ಕಂಡು ತೀವ್ರ ಬೇಸರ ವ್ಯಕ್ತಪಡಿಸಿ, ಉತ್ತಮ ಕೋಣೆ ಹಾಗೂ ಯಂತ್ರ ಲಭ್ಯವಿದೆಯಾದರೂ ತಜ್ಞ ಸಿಬ್ಬಂದಿ ಲಭ್ಯವಿಲ್ಲ. ಎಕ್ಸರೇ ನಿರ್ವಹಣೆಗೆ ಹೊಸ ಸಿಬ್ಬಂದಿಯನ್ನು ನಿಯೋಜಿಸುವಂತೆ ಡಿಹೆಚ್‌ಓಗೆ ಸೂಚಿಸಿದರು.
ಇನ್ನು ಮುಂದೆಯೂ ಹೀಗೆಯೇ ಸರ್ಕಾರಿ ಆಸ್ಪತ್ರೆಗಳಿಗೆ ಹಠಾತ್ ಭೇಟಿ ನೀಡುತ್ತೇನೆ. ವೈದ್ಯರು ಮತ್ತು ಸಿಬ್ಬಂದಿ ಸರಿಯಾಗಿ ಕೆಲಸ ಮಾಡಬೇಕು. ಸಣ್ಣ ಪುಟ್ಟ ಸಮಸ್ಯೆಗಳಿಗೆ ರೋಗಿಗಳನ್ನು ಜಿಲ್ಲಾ ಕೇಂದ್ರಕ್ಕೆ ಶಿಫಾರಸ್ಸು ಮಾಡುವುದನ್ನು ತಪ್ಪಿಸಬೇಕೆಂದು ತಿಳಿಸಿದರಲ್ಲದೇ ಆಸ್ಪತ್ರೆಯ ಸುಧಾರಣೆಗೆ ಏನೇನು ಬೇಕೆಂಬುದರ ಬಗ್ಗೆ ಪಟ್ಟಿಯನ್ನು ಸಿದ್ದಪಡಿಸಿಕೊಟ್ಟಲ್ಲಿ ಒದಗಿಸಲಾಗುವುದೆಂದು ಭರವಸೆ ನೀಡಿದರು.
ವೈದ್ಯಕೀಯ ಕೆಲಸ ಅತ್ಯಂತ ಪವಿತ್ರವಾದ ಕೆಲಸ. ಈ ಕೆಲಸದಲ್ಲಿ ಬೇಜವಾಬ್ದಾರಿಯನ್ನು ಎಂದಿಗೂ ಸಹಿಸುವುದಿಲ್ಲ. ಆಸ್ಪತ್ರೆಯ ಎಲ್ಲ ಸಿಬ್ಬಂದಿಗಳು ಪ್ರಮಾಣಿಕತೆಯಿಂದ ಕೆಲಸ ಮಾಡಬೇಕು. ಎಲ್ಲರೂ ಸಮಯ ಪಾಲನೆ ಮಾಡಬೇಕು. ಕೆಲಸದ ಅವಧಿಯಲ್ಲಿ ಕಡ್ಡಾಯವಾಗಿ ಆಸ್ಪತ್ರೆಯಲ್ಲಿ ಲಭ್ಯವಿದ್ದು, ಚಿಕಿತ್ಸೆ ನೀಡಬೇಕು. ಯಾವುದೇ ರೀತಿಯ ದೂರುಗಳು ಬಂದಲ್ಲಿ ಸಹಿಸುವುದಿಲ್ಲ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ದೊಂಢಿಬಾ ನರೋಟೆ, ಪ್ರವೀಣ ಕಾರಬಾರಿ, ಶಿವಕುಮಾರ ವಡ್ಡೆ, ನಾಗೇಶ ಪತ್ರೆ, ರಾಜು ಅಲಬಿದೆ, ಸಚಿನ ರಾಠೋಡ್, ರಾಜು ಶೆಳ್ಕೆ, ಸಂಜು ಮುರ್ಕೆ ಹಾಗೂ ಇತರರಿದ್ದರು.

Ghantepatrike kannada daily news Paper

Leave a Reply

error: Content is protected !!