ಕನ್ನಡ ಶಾಲೆಗಳು ರಕ್ಷಿಸಿ-ಕರ್ನಾಟಕ ಉಳಿಸಿ’ ಹೋರಾಟ 25ರಂದು: ಜಲಾದೆ
ಬೀದರ್: ಈ ತಿಂಗಳ 25ರಂದು ಬೀದರ್, ಕಲಬುರಗಿ, ವಿಜಯನಗರ ಸೇರಿದಂತೆ ಎಳು ಜಿಲ್ಲೆಗಳ 42 ತಾಲೂಕುಗಳಲ್ಲಿ ‘ಕನ್ನಡ ಶಾಲೆಗಳು ರಕ್ಷಿಸಿ-ಕರ್ನಾಟಕ ಉಳಿಸಿ’ ಎಂಬ ಬೇಡಿಕೆ ಸೇರಿದಂತೆ ಸುಮಾರು ಎಳು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಅನುದಾನ ರಹಿತ ಖಾಸಗಿ ಶಾಲಾ ಮಂಡಳಿಯಿಂದ ಶಾಲೆಗಳಿಗೆ ರಜೆ ನೀಡಿ ಶಾಂತಿಯುತ ಹೋರಾಟ ನಡೆಸಲಾಗುವುದೆಂದು ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಾಲಾ ಅಡಳಿತ ಮಂಡಳಿ ಸಂಘದ ಗೌರವಾದ್ಯಕ್ಷರಾದ ರೇವಣಸಿದ್ದಪ್ಪ ಜಲಾದೆ ಹೇಳಿದರು.
ಸೋಮವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಖಾಸಗಿ ಶಾಲೆ ಶಿಕ್ಷಕರು ಕಳೆದ 42 ವರ್ಷಗಳಿಂದ ಎರಡು ಹೊತ್ತು ಊಟ ಮಾಡುವುದಕ್ಕೂ ನೆಮ್ಮದಿ ಇಲ್ಲದಂತಹ ಪರಿಸ್ಥಿತಿ ಸರ್ಕಾರ ಮಾಡಿವೆ. 2009ರಲ್ಲಿ ಬಿಜೆಪಿ ನೇತೃತ್ವದ ಯಡಿಯೂರಪ್ಪ ಸರ್ಕಾರವು 1995ಕ್ಕಿಂತ ಮುಂಚಿನ ಅನುದಾನ ರಹಿತ ಖಾಸಗಿ ಶಾಲೆಗಳನ್ನು ಅನುದಾನಿತ ಶಾಲೆಗಳಾಗಿ ಮಾಡಿರುತ್ತಾರೆ. ತದನಂತರ ಸುಮಾರು 1100ಕ್ಕೂ ಅಧಿತ ಖಾಸಗಿ ಅನುದಾನ ರಹಿತ ಶಾಲೆಗಳು ಅನುದಾನಿತ ಶಾಲೆಗಳಾಗಿ ಪರಿಗಣಿಸಿಲ್ಲ ಎಂದು ಆರೋಪಿಸಿದರು.
ಇತ್ತಿಚೀಗಂತೂ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಸರ್ಕಾರಿ ಕನ್ನಡ ಶಾಲೆಗಳನ್ನು ಕರ್ನಾಟಕ ಆಂಗ್ಲ ಪಬ್ಲಿಕ್ ಶಾಲೆಗಳಾಗಿ ಮಾಡಲು ಹೊರಟಿರುವರು. ಇದು ಒಂದೆಡೆಯಾದರೆ ಈಗಾಗಲೇ ರಾಜ್ಯದಲ್ಲಿ 50 ಸಾವಿರ ಶಿಕ್ಷಕರ ಹುದ್ದೆ ಖಾಲಿ ಇದ್ದು 10 ಸಾವಿರ ಶಾಲಾ ಶಿಕ್ಷಕರನ್ನು ನಿಯುಕ್ತಿಗೊಳಿಸಲಾಗುತ್ತಿದೆ ಎಂದು ಸ್ವತಃ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೆ ಹೇಳಿದ್ದಾರೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಲ್ಲಿ 5 ಸಾವಿರ ಕೋಟಿ ನುದಾನದಲ್ಲಿ 1,250 ಕೋಟಿ ಹಣ ಶಿಕ್ಷಣಕ್ಕೆ ಖರ್ಚು ಮಾಡಲಾಗುತ್ತಿದೆ ಎಂದು ಸಿಎಂ ಹಾಗೂ ಕೆ.ಕೆ.ಆರ್.ಡಿ.ಬಿ ಅಧ್ಯಕ್ಷ ಡಾ.ಅಜಯಸಿಂಗ್ ಹೇಳಿದ್ದಾರೆ. ಆದರೆ ಇಲ್ಲಿಯ ವರೆಗೆ ಯಾವುದೇ ಬೆಳವಣಿಗೆ ಆಗಿಲ್ಲ. ನೂರಾರು ಸರ್ಕಾರಿ ಶಾಲೆಗಳ ಮೇಲ್ಛಾವಣಿ ಸೋರುತ್ತಿವೆ. ಯಾವತ್ತು ಕುಸಿದು ಬೀಳುತ್ತವೆಯೋ ಗೊತ್ತಿಲ್ಲ. ಇಂಥದರಲ್ಲಿ ಕನ್ನಡ ಶಾಲೆಗಳನ್ನು ಮುಚ್ಚಿ ಆಂಗ್ಲ ಮಾದರಿ ಶಾಲೆಗಳನ್ನು ತೆಗೆಯಲು ರಾಜ್ಯ ಸರ್ಕಾರ ಹೊರಟಿದೆ. ಈ ಭಾಗದ ಸಚಿವರು, ಅದರಲ್ಲೂ ಬೀದರ್ ಜಿಲ್ಲಾ ಉಸ್ತುವಾರಿ ಮಂತ್ರಿ ಈಶ್ವರ ಖಂಡ್ರೆಯವರಿಗೆ ವಿಸ್ತ್ರುತವಾಗಿ ವಿವರಿಸಲಾಗಿದ್ದರೂ ಯಾವ ಪ್ರಯೋಜನ ಆಗಲಿಲ್ಲ. ಪೌರಾಡಳಿತ ಸಚಿವರು ನಮ್ಮ ಜಿಲ್ಲೆರಯವರೆ ಆಗಿದ್ದರೂ ಅನೇಕ ಶಾಲೆಗಳು ಗಬ್ಬು ನಾರುತ್ತಿವೆ, ಸ್ವಚ್ಛತೆ ಗೌಣವಾಗಿದೆ ಎಂದು ಆಪಾದಿಸಿದರು.
ಸಂಘದ ಜಿಲ್ಲಾ ಅಧ್ಯಕ್ಷ ರಾಜೇಂದ್ರ ಮಣಗೇರಿ ಮಾತನಾಡಿ, ಈ ತಿಂಗಳ 25ರಂದು ನಡೆಯಲಿರುವ ಹೋರಟದಲ್ಲಿ ಏಳು ಜಿಲ್ಲೆಗಳ ಸಂಘದ ಪ್ರತಿನಿಧಿಗಳು ಎಲ್ಲ 42 ತಾಲೂಕುಗಳಲ್ಲಿ ಹೋರಾಟ ನಡೆಸಬೇಕು, ಅಂದು ತಮ್ಮ ಶಾಲೆಗಳನ್ನು ಮುಚ್ಚಿ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಎಲ್ಲ ಖಾಸಗಿ ಅನುದಾನ ರಹಿತ ಶಾಲಾ ಶಿಕ್ಷಕರು ಹೋರಾಟದಲ್ಲಿ ಪಾಲ್ಗೊಳ್ಳಬೇಕು.
ಅನುಮತ ನವಿಕರಣ ಸರಳಗೊಳಿಸಿ, 15-20 ವರ್ಷದಿಂದ ನಡೆಸುತ್ತಿರುವ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಿ, ಬಡ ಮಕ್ಕಳಿಗೆ ದಾರಿ ದೀಪವಾಗಿದ್ದ ಆರ್.ಟಿ.ಈ ಮರು ಜಾರಿಗೊಳಿಸಿ, ಅನುದಾನಿತ ಶಾಲಾ, ಕಾಲೇಜುಗಳಲ್ಲಿ ಖಾಲಿ ಹುದ್ದೆ ಭರ್ತಿ ಮಾಡಿ, ಅರ್ಕಾರದಿಂದ ಪ್ರಾರಂಭಿಸುತ್ತಿರುವ ಇಂಗ್ಲಿಷ ಮಾದ್ಯಮ ಶಾಲೆಗಳನ್ನು ಕೈ ಬಿಟ್ಟು ಸರ್ಕಾರಿ ಕನ್ನಡ ಶಾಲೆಗಳನ್ನು ರಕ್ಷಿಸಿ, ಅನಧಿಕೃತ ಕೋಚಿಂಗ್ ಸೆಂಟರ್ಗಳನ್ನು ಬಂದ್ ಮಾಡಿ, 371(ಜೆ) ಅಡಿ ಸಿಗಬೇಕಾದ ಎಲ್ಲ ಯೋಜನೆಗಳನ್ನು ಶಾಲೆಗಳಿಗೆ ನೀಡಿ, ಕನ್ನಡ ಶಾಲೆಗಳು ರಕ್ಷಿಸಿ, ಕರ್ನಾಟಕ ಉಳಿಸಿ ಎಂಬ ಬೇಡಿಕೆಗಳು ಮುಂದಿಟ್ಟುಕೊಂಡು ಏಳು ಜಿಲ್ಲೆಗಳಲ್ಲಿ ನಮ್ಮ ಸಂಘ ಹೋರಾಟ ನಡೆಸಲಿದೆ ಎಂದರು.
ಸAಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಗುರುನಾಥ ರೆಡ್ಡಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಹಮ್ಮದ್ ಸಲಾವುದ್ದಿನ್ ಫರಾನ್, ಬೀದರ್ ತಾಲೂಕು ಅಧ್ಯಕ್ಷ ಸಂದೀಪ ಶಟಕಾರ, ವಿದ್ಯಾ ಭಾರತಿ ಜಿಲ್ಲಾಧ್ಯಕ್ಷ ಪ್ರೊ.ಎಸ್.ಬಿ ಸಜ್ಜನಶೆಟ್ಟಿ, ತಾಲೂಕು ಪ್ರ.ಕಾರ್ಯದರ್ಶಿ ಗಣಪತಿ ಸೋಲಪುರೆ, ಮಾಧ್ಯಮಿಕ ಶಿಕ್ಷಣ ಸಂಘದ ಅಧ್ಯಕ್ಷ ಸಂತೋಷ ಮಂಗಳುರೆ, ಸಂಘದ ಮಾಧ್ಯಮ ವಕ್ತಾರ ಶರದ್ ಘಂಟೆ ಹಾಗೂ ಇತರರು ಪತ್ರಿಕಾ ಗೋಷ್ಟಿಯಲ್ಲಿದ್ದರು.