ಕನ್ನಡ ಕಟ್ಟುವಲ್ಲಿ ಬೀದರ ವಿಶ್ವವಿದ್ಯಾಲಯದ ಪಾತ್ರ ಮಹತ್ವದ್ದು – ಪ್ರೊ.ಪುರುಷೋತ್ತಮ ಬಿಳಿಮಲೆ
ಬೀದರ: ಕರ್ನಾಟಕದ ಗಡಿಭಾಗದಲ್ಲಿರುವ ನೂತನ ಬೀದರ ವಿಶ್ವವಿದ್ಯಾಲಯದ ಮೇಲೆ ಕನ್ನಡ ಕಟ್ಟುವ ಜವಾಬ್ದಾರಿಯಿದೆ. ಆ ದಿಶೆಯಲ್ಲಿ ವಿಶ್ವವಿದ್ಯಾಲಯವು ಕನ್ನಡಪರ ಚಟುವಟಿಕೆಗಳನ್ನು ಹಮ್ಮಿಕೊಂಡು ಕನ್ನಡದ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಿಸಿದೆ ಎಂದು ಕ್ನಡ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರ್ಕಾರದ ಅಧ್ಯಕ್ಷರಾದ ಪ್ರೊ.ಪುರುಷೋತ್ತಮ ಬಿಳಿಮಲೆಯವರು ಹೇಳಿದರು. ಅವರು ಪ್ರಪ್ರಥಮ ಬಾರಿಗೆ ಬೀದರ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಸಂವಾದದಲ್ಲಿ ಮಾತನಾಡಿದರು. ಮುಂದುವರೆದು ಕರ್ನಾಟಕದ ಕಿರೀಟಪ್ರಾಯ ಬೀದರ ಜಿಲ್ಲೆಗೆ ನೂತನ ವಿಶ್ವವಿದ್ಯಾಲಯ ಆರಂಭವಾದದ್ದು ಹೆಮ್ಮೆಯ ಸಂಗತಿಯಾಗಿದೆ. ಕನ್ನಡದ ಹಲವು ಪ್ರಥಮಗಳ ಪುಣ್ಯಭೂಮಿ ಶರಣರ ಬೀಡು, ಈ ಕಲ್ಯಾಣ ಕರ್ನಾಟಕವಾಗಿದೆ. ಕವಿರಾಜಮಾರ್ಗ, ವಡ್ಡಾರಾಧನೆ ಹುಟ್ಟಿದ್ದು ಈ ಭಾಗದಲ್ಲಿ, ಬೌದ್ಧ ಧರ್ಮದ ನೆಲೆ ಇಲ್ಲಿದೆ. ನಾಗಾವಿ ವಿಶ್ವವಿದ್ಯಾಲಯ ಈ ಭಾಗದಲ್ಲಿತ್ತು. ಜಗತ್ತಿನ ಮೊದಲ ಸಂಸತ್ತು ಎನಿಸಿದ ಬಸವಕಲ್ಯಾಣ ಇಲ್ಲಿದೆ. ದೇವರುಗಳಿಗೆ ಕನ್ನಡ ಕಲಿಸಿದ ವಚನಕಾರರ ನೆಲೆ ಈ ಪ್ರದೇಶವಾಗಿದೆ. ಹೀಗಾಗಿ ಎಲ್ಲರೂ ಸೇರಿ ಕನ್ನಡವನ್ನು ಉಳಿಸೋಣ, ಬೆಳೆಸೋಣ, ಅಭಿವೃದ್ಧಿಪಡಿಸೋಣವೆಂದರು. ಸಭೆಯಲ್ಲಿ ಪಾಲ್ಗೊಂಡಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ಶ್ರೀ ಸಂತೋಷ ಹಾನಗಲ್‌ರವರು ಮಾತನಾಡುತ್ತಾ ಬೀದರ ವಿಶ್ವವಿದ್ಯಾಲಯದ ಪರಿಸರವು ಸಾಹಿತ್ಯಕವಾಗಿ ಶ್ರೀಮಂತವಾಗಿದೆ. ಇಲ್ಲಿನ ಸ್ಮಾರಕಗಳು, ಕೋಟೆಕೊತ್ತಲಗಳು ಈ ಭಾಗದ ಶ್ರೀಮಂತಿಕೆಯನ್ನು ಸಾರುತ್ತವೆ. ವಿದ್ಯಾರ್ಥಿಗಳಿಗೆ ಈ ಭಾಗದ ಸಮಗ್ರ ತಿಳುವಳಿಕೆಯ ಅವಶ್ಯಕತೆಯಿದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಬೀದರ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಬಿ.ಎಸ್.ಬಿರಾದಾರರವರು ಮಾತನಾಡುತ್ತಾ ಬೀದರ ವಿಶ್ವವಿದ್ಯಾಲಯವು ಕನ್ನಡದ ಅಭಿವೃದ್ಧಿಗೆ ಸದಾ ಸಿದ್ಧವಿದೆ. ಆ ದಿಶೆಯಲ್ಲಿ ಕನ್ನಡಪರ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ. ಗಡಿ ಭಾಗದಲ್ಲಿ ಕ್ನನಡ ಕಟ್ಟುವ ಕೆಲಸ ನಿರಂತರವಾಗಿ ಮುಂದುವರೆಯುತ್ತದೆ. ಕನ್ನಡ ಸಾಹಿತ್ಯ ಬೆಳವಣಿಗೆಗಾಗಿ ಇಷ್ಟರಲ್ಲೇ ವಿಶ್ವವಿದ್ಯಾಲಯದಲ್ಲಿ ಪ್ರಸಾರಾಂಗ ಆರಂಭಿಸಲಾಗುತ್ತದೆ ಎಂದರು. ಕನ್ನಡದ ಉಳಿವಿಗಾಗಿ ಪದವಿಯ ನಾಲ್ಕು ಸೆಮಿಸ್ಟರ್‌ಗಳಲ್ಲಿ ಕನ್ನಡ ಬೋಧನೆಗೆ ಅವಕಾಶ ಕಲ್ಪಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬೀದರ ವಿಶ್ವವಿದ್ಯಾಲಯದ ಕುಲಸಚಿವರಾದ ಶ್ರೀ ಮಹ್ಮದ್ ಶಕೀಲ್‌ರವರು, ಭಾಷಾ ನಿಕಾಯದ ಹಿಂದಿನ ಡೀನರಾಗಿದ್ದ ಪ್ರೊ.ಜಗನ್ನಾಥ ಹೆಬ್ಬಾಳೆ, ಸಮಾಜ ವಿಜ್ಞಾನ ನಿಕಾಯದ ಡೀನರಾದ ಪ್ರೊ.ದೇವಿದಾಸ ತುಮಕುಂಟೆ, ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯರಾದ ಶ್ರೀ ವಿಜಯಕುಮಾರ ಸೋನಾರೆ, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಡಾ.ಸಂಜೀವಕುಮಾರ ಅತಿವಾಳೆ, ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಶ್ರೀ ಸಿದ್ರಾಮ ಸಿಂಧೆ, ವಿಶೇಷಾಧಿಕಾರಿಗಳಾದ ಡಾ.ರವೀಂದ್ರನಾಥ ಗಬಾಡಿ, ಕನ್ನಡ ವಿಭಾಗದ ಡಾ.ರಾಮಚಂದ್ರ ಗಣಾಪೂರ, ಶ್ರೀ ಶಿವರಾಜ ಪಾಟೀಲ ಹಾಗೂ ಬೀದರ ವಿಶ್ವವಿದ್ಯಾಲಯದ ಅಧ್ಯಾಪಕ, ಅಧ್ಯಾಪಕೇತರ ಸಿಬ್ಬಂದಿ ವರ್ಗದವರು ಹಾಜರಿದ್ದರು.