ಬೀದರ್

ಒತ್ತಡದ ಬದುಕಿಗೆ ಯೋಗ ಅತ್ಯವಶ್ಯಕ ಡಾ.ಶೈಲೇಂದ್ರ ಬೆಲ್ದಾಳೆ

ಒತ್ತಡದ ಬದುಕಿಗೆ ಯೋಗ ಅವಶ್ಯಕ’ ಯೋಗ ಯಾವುದೇ ಧರ್ಮಕ್ಕೆ ಸೀಮಿತವಲ್ಲ. ಪ್ರತಿಯೊಬ್ಬರೂ ಯೋಗ ಮಾಡಬಹುದು. ಯೋಗ ಮಾಡುವುದರಿಂದ ಆರೋಗ್ಯವಂತರಾಗಿ ಬಾಳಬಹುದು ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ ಶೈಲೆಂದ್ರ ಬೆಲ್ದಾಳೆ ಹೇಳಿದರು.
ಬೀದರ್ ದಕ್ಷಿಣ ಕ್ಷೇತ್ರದ ಗೋರನಳ್ಳಿ ಗ್ರಾಮದ ಹೊರವಲಯದಲ್ಲಿರುವ ಲಿಂಗರಾಜ ಅಪ್ಪ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ 10 ನೇ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಹಕ್ಕೆ ಆಹಾರ ಹೇಗೆ ಅಗತ್ಯವೋ, ಹಾಗೆಯೇ ಪ್ರತಿನಿತ್ಯ ಯೋಗ ಮತ್ತು ಧ್ಯಾನದ ಅಭ್ಯಾಸ ಅವಶ್ಯಕವಾಗಿವೆ. ಅಷ್ಟಾಂಗ ಯೋಗದ ಅನುಷ್ಠಾನದಿಂದ ಚಿತ್ತಚಂಚಲತೆ ನಿವಾರಣೆಯಾಗಿ ಮಾನಸಿಕ ಸ್ಥಿರತೆ ದೊರೆತು ವಿವೇಕ ಲಭಿಸುವುದು. ಕೋವಿಡ್‌ನಂಥ ಶ್ವಾಸಕೋಶ ಸಂಬಂಧಿ ರೋಗಗಳಿಗೆ ಯೋಗ ಅತ್ಯಂತ ಪರಿಣಾಮಕಾರಿಯಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಯೋಗ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಯೋಗ ವಿಶ್ವಕ್ಕೆ ಭಾರತ ಕೊಟ್ಟ ಕೊಡುಗೆಯಾಗಿದೆ. ಯೋಗವು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ,  ಪ್ರತಿಯೊಬ್ಬರೂ ನಿತ್ಯ ಯೋಗ ಅಭ್ಯಾಸ ಮಾಡಬೇಕು ಎಂದು ಹೇಳಿದರು. ಇನ್ನೂರ್ವ ಅತಿಥಿಕಾಲೇಜು ನಿರ್ದೇಶಕಿ ಡಾ. ಉಮಾ ದೇಶಮುಖ ಮಾತನಾಡಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಶರಣಬಸವಪ್ಪ ಅಪ್ಪ, ಮಾತೆ ಡಾ. ದಾಕ್ಷಾಯಿಣಿ, ಚಿ. ದೊಡ್ಡಪ್ಪ ಅಪ್ಪ ಹಾಗೂ ಕಾರ್ಯದರ್ಶಿ ಬಸವರಾಜ ದೇಶಮುಖ ಅವರ ಮಾರ್ಗದರ್ಶನದಲ್ಲಿ ಕಾಲೇಜಿನಲ್ಲಿ ಯೋಗ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಎನ್.ಕೆ. ಜಾಬಶೆಟ್ಟಿ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಯೋಗ ವಿಭಾಗದ ಮುಖ್ಯಸ್ಥೆ ಡಾ. ಸುರೇಖಾ ಬಿರಾದಾರ ಹಾಗೂ ವಿದ್ಯಾರ್ಥಿಗಳು ಯೋಗದ ವಿವಿಧ ಭಂಗಿಗಳನ್ನು ಪ್ರದರ್ಶಿಸಿದರು.
ಕಾಲೇಜು ಪ್ರಾಚಾರ್ಯೆ ಡಾ. ವಿನಿತಾ ಪಾಟೀಲ, ನಗರಸಭೆ ಸದಸ್ಯ ಶಶಿಧರ ಹೊಸಳ್ಳಿ, ಶರಣಬಸವೇಶ್ವರ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಡಾ. ಸತೀಶ ಪ್ರತಾಪುರ ಉಪಸ್ಥಿತರಿದ್ದರು.
ಪ್ರೊ. ವಿಜಯಾನಂದ ಕಪಟೆ ನಿರೂಪಿಸಿದರು. ಎನ್.ಎಸ್.ಎಸ್. ಅಧಿಕಾರಿ ಬಸವಲಿಂಗ ಸ್ವಾಮಿ ವಂದಿಸಿದರು.
ಲಿಂಗರಾಜ ಅಪ್ಪ ಎಂಜಿನಿಯರಿಂಗ್ ಕಾಲೇಜು, ಚನ್ನಬಸಮ್ಮ ಬಿಸಿಎ, ಬಿ.ಕಾಂ ಕಾಲೇಜು, ಶರಣಬಸವೇಶ್ವರ ಪದವಿಪೂರ್ವ ಕಾಲೇಜು,ಶರಣಬಸವ ಪಬ್ಲಿಕ್ ಶಾಲೆಯ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
Ghantepatrike kannada daily news Paper

Leave a Reply

error: Content is protected !!