ಎಮ್.ಎಲ್.ಸಿ ಐವನ್ ಡಿಸೋಜಾ ಮನೆ ಮೇಲೆ ಕಲ್ಲು ತೂರಾಟ: ಖಂಡನೆ
ಬೀದರ್: ವಿಧಾನ ಪರಿಷತ್ ಸದಸ್ಯರು ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಐವನ್ ಡಿಸೋಜಾ ಅವರ ಮನೆ ಮೇಲೆ ಕಲ್ಲು ತೂರಾಟ ನಡೆಸಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕೆಂದು ಕ್ರೈಸ್ತ ಸಮಾಜದ ಹಿರಿಯ ಮುಖಂಡರಾದ ಎಸ್.ಪಿ ರಾಜಶೇಖರ ಹೇಳಿದರು.
ಶನಿವಾರ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಡಿಸೋಜಾ ಅವರು ಈಗಾಗಲೇ ಪಕ್ಷಕ್ಕೆ ಹಾಗೂ ಸರ್ಕಾರಕ್ಕೆ ತಮ್ಮ ಹೇಳಿಕೆ ಸ್ಪಷ್ಟಪಡಿಸಿದ್ದಾರೆ. ಸಿದ್ಧರಾಮಯ್ಯನವರ ಮೇಲಿನ ಆರೋಪ ಈಗಾಗಲೇ ಕೋರ್ಟ್ ಮೆಟ್ಟಿಲೇರಿದೆ. ಈ ತಿಂಗಳ 29ರಂದು ಉಚ್ಛ ನ್ಯಾಯಾಲಯದಿಂದ ತೀರ್ಪು ಪ್ರಕಟವಾಗಬೇಕಿದೆ.. ಈ ದೇಶದಲ್ಲಿ ಮುಕ್ತ ವಾಕ್ ಸ್ವಾತಂತ್ರ್ಯವಿರುವಾಗ ಒಬ್ಬರ ಧ್ವನಿ ಹತ್ತಿಕ್ಕಲು ಕಲ್ಲು ತೂರಾಟ ನಡೆಸುವುದು, ದಾಂಧಲೆ ಮಾಡುವುದು, ಹಿಂಸಾತ್ಮಕ ಪ್ರವೃತ್ತಿಗೆ ಕೈ ಹಾಕುವುದು ಯಾರಿಗೂ ಶೋಭೆ ತರುವಂಥದ್ದಲ್ಲ. ಅದು ಯಾವುದೇ ಪಕ್ಷದ ವಿಚಾರ ಆಗಿರಲಿ, ಯಾರ ಮೇಲೆಯೂ ಹಲ್ಲೆ ಆಗುವುದು ಒಳ್ಳೆಯ ಬೆಳವಣಿಗೆ ಅಲ್ಲ. ಆದ್ದರಿಂದ ಈ ತಿಂಗಳ 26ರಂದು ಡಿಸೋಜಾ ಅವರ ಮನೆ ಮೇಲೆ ಕಲ್ಲು ತೂರಾಟ ನಡೆಸಿರುವ ಕಿಡಿಗೇಡಿಗಳನ್ನು ಕೂಡಲೇ ಬಮಧಿಸಬೇಕೆಂದು ಆಗ್ರಹಿಸಿ ಕ್ರೈಸ್ತ ಸಮುದಾಯದ ಮುಖಾಂತರ ಪ್ರತಿಭಟನೆ ನಡೆಸಲಾಗುವುದೆಂದು ತಿಳಿಸಿದರು.
ನಗರ ಸಭೆ ನಾಮನಿರ್ದೇಶಿತ ಸದಸ್ಯರು ಹಾಗೂ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಸುನಿಲ್ ಬಚ್ಚನ್ ಮಾತನಾಡಿ, ಈ ತಿಂಗಳ 26ರಂದು ಬೆಳಿಗ್ಗೆ 10 ಗಂಟೆಗೆ ನಗರದ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿ ಶಾಂತಿಯುತ ಪ್ರತಿಭಟನೆ ನಡೆಸಲಾಗುವುದು. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ರ್ಯಾಲಿ ಹಮ್ಮಿಕೊಂಡು ಡಿ.ಸಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದೆಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಬೀದರ್ ತಾಲೂಕು ಉಪಾಧ್ಯಕ್ಷರಾದ ಪಿಲಿಪ್ ದೊಡ್ಡಮನಿ ಹಾಗೂ ಕ್ರೈಸ್ತ ಸಮುದಾಯದ ಯುವ ಮುಖಂಡ ತಿಮುತಿ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.