ಇಂದಿನ ಪೀಳಿಗೆಯು ಕನ್ನಡದ ಮಹತ್ವವನ್ನು ಅರಿತುಕೊಳ್ಳಬೇಕಿದೆ’: ಕಮಲಾ ಹಂಪನಾ
ಬೆಂಗಳೂರಿನ ವಿಶ್ವಮಾನವ ಸಂಗೀತಯಾನ ವತಿಯಿಂದ ಲೇಖಕಿ ನಮ್ರತಾ ನಾಯಕ್ ಅವರ ʻಚರಿತಾ’ ಕವನ ಸಂಕಲನ ಬಿಡುಗಡೆ ಸಮಾರಂಭವು 2023 ಆಗಸ್ಟ್ 27ನೇ ಭಾನುವಾರದಂದು ಶ್ರೀ ಕೃಷ್ಣರಾಜ ಪರಿಷನ್ಮಂದಿರ, ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ನೆರವೇರಿತು.
ಹಿರಿಯ ಸಾಹಿತಿ ಕಮಲಾ ಹಂಪನಾ, ‘ಕವಯಿತ್ರಿ ನಮ್ರತಾ ನಾಯಕ್ ನಮ್ಮ ಕುಟುಂಬದ ಹೆಣ್ಣು ಮಗಳು ಎಂದು ಹೇಳಿಕೊಳ್ಳಲು ಬಹಳ ಸಂತೋಷವಾಗಿದೆ. ಇನ್ನಷ್ಟು ಹೊಸ ಕವನ ಸಂಕಲನಗಳು, ಕಾದಂಬರಿಗಳು ಮೂಡಿ ಬರಲಿ. ಕನ್ನಡ ಸಂಸ್ಕೃತಿ, ಸಾಹಿತ್ಯಕ್ಕಾಗಿ ಹೋರಾಡಿ 83 ವರ್ಷಗಳ ಕಾಲ ಬದುಕಿದೆ ಎಂಬ ಹೆಮ್ಮೆ ಇದೆ. ಇಂದಿನ ಪೀಳಿಗೆಯು ಕನ್ನಡದ ಮಹತ್ವವನ್ನು ಅರಿತುಕೊಳ್ಳಬೇಕಿದೆ ಎಂದರು.
ಹಿರಿಯ ಸಾಹಿತಿ ಬ್ಯಾಡನೂರು ಶಾಂತವೀರಪ್ಪ ಮಾತನಾಡಿ, ಸಾಹಿತ್ಯ ಮತ್ತು ಸಂಗೀತವನ್ನು ಒಂದೇ ಜಾಗದಲ್ಲಿ ಅನುಭವಿಸುವ ಅವಕಾಶ ದೊರೆಯಿತು. ಕವನ ಸಂಕಲನದ ‘ಚರಿತಾ’ ಶೀರ್ಷಿಕೆಯೆ ಬಹಳ ವಿಭಿನ್ನವಾಗಿದೆ. ‘ಚರಿತಾ’ ಪದದ ಅರ್ಥ ಚಲಿಸುವುದು ಎಂಬುದಾಗಿದೆ. ಈ ಕವನಸಂಕಲನ ಅನೇಕ ರಸಗಳಿಂದ ಕೂಡಿದ್ದು, ಈ ಕೃತಿಯಲ್ಲಿ ಒಟ್ಟು 57 ಕವನಗಳನ್ನು ಲೇಖಕಿ ಬಹಳ ಸುಂದರವಾಗಿ ಕಟ್ಟಿಕೊಟಿದ್ದಾರೆ.
ಈ ಕವನ ಸಂಕಲನದ ಒಂದು ಕವನದಲ್ಲಿ ಪ್ರಕೃತಿ ಶಾಶ್ವತವಾದದ್ದು. ಮನುಷ್ಯನ ಒಣ ಪ್ರತಿಷ್ಟೆ, ಪ್ರಕೃತಿಯ ಮುಂದೆ ಶೂನ್ಯವಾಗಿದೆ ಎಂಬುದನ್ನು ತಿಳಿಸುತ್ತದೆ. ಕವಯಿತ್ರಿಯು ತಮ್ಮ ಅನುಭವಗಳನ್ನು ಪ್ರತಿ ಕವನದಲ್ಲಿ ಪೋಣಿಸಿದ್ದಾರೆ ಎಂದು ಚರಿತಾ ಕವನ ಸಂಕಲನ ಕೃತಿಯನ್ನು ಪರಿಚಯಿಸಿದರು.
ಹಿರಿಯ ರಂಗಕರ್ಮಿ ಹಾಗೂ ಚಿಂತಕ ಕೆ.ವಿ ನಾಗರಾಜ್ ಮೂರ್ತಿ, ‘ಚರಿತಾ’ ಕವನ ಸಂಕಲನವು ಅನೇಕ ಉತ್ತಮ ಕವನಗಳಿಂದ ಕೂಡಿದೆ. ಕವಯಿತ್ರಿ ಮತದಾನದ ಸಮಯದಲ್ಲಿ ರಾಜಕಾರಣದ ಸನ್ನಿವೇಶಗಳನ್ನು ಬಹಳ ಪ್ರಾಸಬದ್ದವಾಗಿ ತಿಳಿಸಿದ್ದಾರೆ. ಕಾಲ, ಸಂಬಂಧ, ಹೀಗೆ ಅನೇಕ ವಿಚಾರಗಳನ್ನು ಈ ಕವನಸಂಕಲನದಲ್ಲಿ ಕಾಣಬಹುದಾಗಿದೆ ಎಂದು ಕಾವ್ಯ ಸಂಕಲನದ ಒಳತಿಳಿಯನ್ನು ವಿವರಿಸಿದರು.
ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಎಂ. ಪ್ರಕಾಶಮೂರ್ತಿ ಮಾತನಾಡಿ, ‘ಕನ್ನಡ ಪುಸ್ತಕ ಸಂಸ್ಕೃತಿಯನ್ನು ನಾವೆಲ್ಲರೂ ಉಳಿಸಿ ಬೆಳೆಸಬೇಕಾದ ಅನಿವಾರ್ಯತೆ ಬಹಳ ಇದೆ. ಚರಿತಾ ಕವನ ಸಂಕಲನದ ಕವಯಿತ್ರಿ ನಮ್ರತಾ ನಾಯಕ್ ಅವರ ವೃತ್ತಿ ಐ.ಟಿ ಫೀಲ್ಡ್ ಆಗಿದೆ ಆದರೆ ಪ್ರವೃತ್ತಿ ಬರವಣಿಗೆ ಎಂದಾಗ ಬಹಳ ಸಂತೋಷವಾಯಿತು ಎಂದು ತಿಳಿಸಿದರು.
ಲೇಖಕಿ ನಮ್ರತಾ ನಾಯಕ್, ‘ನನ್ನ ಕವನಗಳನ್ನು ಸಂಕಲನ ರೂಪಕ್ಕೆ ತರಲು ಸಹಕರಿಸಿದ ಗುರುಗಳಾದ ಎಂ. ಖಾಸೀಮ್ ಮಲ್ಲಿಗೆ ಮಡುವು ಹಾಗೂ ಕನ್ನಡ ಸಾಹಿತ್ಯ ಕೃಷಿಗೆ ಬೆನ್ನೆಲುಬಾಗಿರುವ ಪ್ರತಿಯೊಬ್ಬರಿಗೂ ಧನ್ಯವಾದಾಗಳು ಎಂದರು.
ವಿಶ್ವ ಮಾನವ ಸಂಗೀತಯಾನ ವಿದ್ಯಾರ್ಥಿಗಳಿಂದ ಗುರು
ಕಾರ್ಯಕ್ರಮದಲ್ಲಿ ಎಲ್.ಎನ್.ಆರ್. ಸಮೂಹ ಶಿಕ್ಷಣ ಸಂಸ್ಥೆ ಪ್ರಾಚಾರ್ಯರು ಅರುಣ, ವಿಶ್ವ ಮಾನವ ಸಂಗೀತಯಾನ ಸಂಸ್ಥಾಪಕ ಎಂ. ಖಾಸೀಮ್ ಮಲ್ಲಿಗೆ ಮಡುವು , ಸೇರಿದಂತೆ ಅನೇಕ ಸಾಹಿತ್ಯಸಕ್ತರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.