ಆಸ್ಪತ್ರೆಗೆ ಬರುವ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಕಲ್ಪಿಸುವತ್ತ ವೈದ್ಯಾಧಿಕಾರಿ ಗಳು ಮುಂದಾಗಬೇಕು : ಜಿಪಂ ಸಿಇಒ ಡಾ. ಗಿರೀಶ ಬದೋಲೆ
ಹುಮನಾಬಾದ್: ಜು.17:ಸಾರ್ವಜನಿಕ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಕಲ್ಪಿಸುವತ್ತ ವೈದ್ಯಾಧಿಕಾರಿ ಗಳು ಮುಂದಾಗಬೇಕು. ಯಾವುದೇ ರೀತಿಯಲ್ಲಿ ದೂರು ಬಾರದಂತೆ ಎಚ್ಚರ ವಹಿಸಿ ಎಂದು ಜಿಪಂ ಸಿಇಒ ಡಾ. ಗಿರೀಶ ಬದೋಲೆ ಸೂಚಿಸಿದರು. ಪಟ್ಟಣದ ಸಾರ್ವ ಜನಿಕ ಆಸ್ಪತ್ರೆಗೆ ಕೆಲ ದಿನಗಳ ಹಿಂದೆ ಮಹಿಳಾ ಆಯೋಗ ಭೇಟಿ ನೀಡಿದ್ದಾಗ ಆಸ್ಪತ್ರೆಯಲ್ಲಿ ಕಂಡು ಬಂದ ಕೆಲ ಸಮಸ್ಯೆಗಳ ಕುರಿತು ನೋಟಿಸ್ ಜಾರಿ ಮಾಡಲಾಗಿತ್ತು. ಅದನ್ನು ಗಮನಿಸಿ ಮಂಗಳವಾರ ಆಸ್ಪತ್ರೆಗೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ತಂಡ ದೊಂದಿಗೆ ಅಪೌಷ್ಟಿಕ ಮಕ್ಕಳ ಪುನಶ್ಚತನ ಕೇಂದ್ರ, ಹೆರಿಗೆ, ಡಯಾಲಿಸಿಸ್ ಕೇಂದ್ರ, ಐಸಿಯು ಘಟಕಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು. ಡಯಾಲಿಸಿಸ್ ಕೇಂದ್ರಕ್ಕೆ ಬರುವ ರೋಗಿಗಳಿಗೆ ಉತ್ತಮ ರೀತಿಯಲ್ಲಿ. ಸ್ಪಂದನೆ ಸಿಗಬೇಕು. ಅಗತ್ಯ ಔಷಧೋಪಚಾರವನ್ನು ಆಸ್ಪತ್ರೆಯೇ ಒದಗಿಸಬೇಕು. ಕುಡಿಯುವ ನೀರಿನ ಆರ್‍ಒ ಘಟಕದ ರಿಪೇರಿ ಹಾಗೂ ಕುಡಿಯುವ ನೀರಿನ ಟ್ಯಾಂಕ್ ಸ್ವಚ್ಛತೆ ಹಾಗೂ ಐಸಿಯು ಘಟಕದಲ್ಲಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಸೂಚಿಸಿದರು.
ಹಳ್ಳಿಖೇಡ (ಕೆ), ಜಲಸಂಗಿ, ಮುಸ್ತಪುರ ವಾಡಿ ಗ್ರಾಮಕ್ಕೂ ಭೇಟಿ ನೀಡಿ ಉದ್ಯೋಗ ಖಾತ್ರಿ ಸೇರಿ ಇನ್ನಿತರ ಯೋಜನೆಗಳ ಕಾಮಗಾರಿಗಳ ಅನುಷ್ಠಾನ ಕುರಿತು ಪರಿಶೀಲನೆ ನಡೆಸಿದರು.
ಜಿಲ್ಲಾ ವೈದ್ಯಾಧಿಕಾರಿ ಡಾ. ಜ್ಞಾನೇಶ್ವರ ನಿರಗುಡೆ, ತಾಲೂಕು ವೈದ್ಯಾಧಿಕಾರಿ ಡಾ. ಶಿವಕುಮಾರ ಸಿದ್ದೇಶ್ವರ, ಡಾ. ವಾಜರ್ ಡ್ಯಾನಿ, ಡಾ. ಬಸವಂತರಾಯ ಗುಮ್ಮೆದ್, ಡಾ. ದಿಲೀಪ ಡೊಗ್ರೆ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ದೀಪಿಕಾ ನಾಯಕರ್ ಸೇರಿದಂತೆ ಅನೇಕರಿದ್ದರು.