ಅವಹೇಳನಕಾರಿ ವಿಡಿಯೊ: ಶುಶ್ರೂಷಾ ಅಧಿಕಾರಿಗಳ ಸಂಘ ಖಂಡನೆ
ಬೀದರ್: ಹುಬ್ಬಳ್ಳಿಯ ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸೆಸ್(ಕಿಮ್ಸ್) ವಿದ್ಯಾರ್ಥಿಗಳು ಮಹಿಳಾ ಶುಶ್ರೂಷಾ ಅಧಿಕಾರಿಗಳ ಅವಹೇಳನಕಾರಿ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವುದನ್ನು ಕರ್ನಾಟಕ ರಾಜ್ಯ ಸರ್ಕಾರಿ ಶುಶ್ರೂಷಾ ಅಧಿಕಾರಿಗಳ ಸಂಘ ತೀವ್ರವಾಗಿ ಖಂಡಿಸಿದೆ.
ಕಾಲೇಜಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರದರ್ಶಿಸಲು ‘ಭದ್ರ’ ಸಿನಿಮಾದ ಹಾಡು ಬಳಸಿಕೊಂಡು ಎಂ.ಬಿ.ಬಿ.ಎಸ್. ದ್ವಿತೀಯ ವರ್ಷದ ವಿದ್ಯಾರ್ಥಿಗಳು 1.05 ನಿಮಿಷದ ಅಸಭ್ಯ ವಿಡಿಯೊ ಮಾಡಿದ್ದಾರೆ. ಶುಶ್ರೂಷಕ ವೃತ್ತಿಗೆ ಅವಮಾನಿಸಿದ್ದಾರೆ ಎಂದು ಸಂಘದ ರಾಜ್ಯ ಅಧ್ಯಕ್ಷ ರಾಜಕುಮಾರ ಮಾಳಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿ ಮಹೇಂದ್ರ ರೆಡ್ಡಿ ವಿಡಿಯೊ ಅನ್ನು ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಾಕಿದ್ದು, ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ತೆಗೆದು ಹಾಕಿದ್ದಾನೆ ಎಂದು ಹೇಳಿದ್ದಾರೆ.
ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಶುಶ್ರೂಷಾ ಅಧಿಕಾರಿಗಳ ಪಾತ್ರ ಬಹಳ ಮಹತ್ವದ್ದಾಗಿದೆ. ಅವರಿಗೆ ಅಪಮಾನ ಮಾಡುವುದನ್ನು ಸಹಿಸಲಾಗದು ಎಂದು ತಿಳಿಸಿದ್ದಾರೆ.
ವಿಡಿಯೊ ಮಾಡಿದ ವಿದ್ಯಾರ್ಥಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು. ಈ ರೀತಿಯ ಘಟನೆಗಳು ಪುನರಾವರ್ತನೆ ಆಗದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.