ಅರಿವು ಸೇವಾ ಸಂಸ್ಥೆ ಬೀದರ ಉದ್ಘಾಟನಾ ಸಮಾರಂಭ.
ಬೀದರ್: ಯಾವುದೇ ಫಲಾಪೇಕ್ಷೆಯಿಲ್ಲದೆ ನಿಸ್ವಾರ್ಥ ಮತ್ತು ತ್ಯಾಗ ಮನೋಭಾವದಿಂದ ಸೇವೆ ಮಾಡುವವರಿಗೆ ಸಮಾಜ ಗುರುತಿಸಿ ಗೌರವಿಸುತ್ತದೆ. ಇಂಥ ಸೇವೆಯೇ ಸಮಾಜದಲ್ಲಿ ಚಿರಸ್ಥಾಯಿಯಾಗಿ ಉಳಿಯುತ್ತದೆ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ.ಸಂಜೀವಕುಮಾರ ಅತಿವಾಳೆ ಹೇಳಿದರು.
ನಗರದ ಹೋಟೆಲ್ ಕೃಷ್ಣಾ ರೆಜೆನ್ಸಿಯಲ್ಲಿ ಗುರುವಾರ ರಾತ್ರಿ ಹಮ್ಮಿಕೊಂಡಿದ್ದ ಅರಿವು ಸೇವಾ ಸಂಸ್ಥೆ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ಸಮಾಜದ ಅಭಿವೃದ್ಧಿ ಹಾಗೂ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರುವ ಕೆಲಸ ಮಾಡುವವರ ಸಂಖ್ಯೆ ಹೆಚ್ಚಾಗಬೇಕಿದೆ. ನಿಸ್ವಾರ್ಥದಿಂದ ಮಾಡುವ ಸೇವೆ ದೇವರಿಗೊಪ್ಪುತ್ತದೆ. ಯುವ ಮುಖಂಡ ಪ್ರಶಾಂತ ವಿಶ್ವಕಮ೯ ಅನೇಕ ಉತ್ತಮವಾದ ಕಾರ್ಯಯೋಜನೆಯನ್ನು ಹಾಕಿಕೊಂಡು ಸಂಸ್ಥೆ ಹುಟ್ಟು ಹಾಕಿದ್ದಾರೆ. ಒಳ್ಳೆಯ ಕೆಲಸ ಮಾಡುವವರಿಗೆ ಸಮಾಜ ಸಹ ಸಾಥ್ ನೀಡಬೇಕು ಎಂದರು.
ಶುಕ್ಲತೀರ್ಥ ಸೇವಾ ಸಮಿತಿ ಅಧ್ಯಕ್ಷ ಸಂತೋಷ ಕಾಮಣ್ಣೋರ್ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಅನೇಕ ಸಮಸ್ಯೆಗಳಿವೆ. ಅವುಗಳಿಗೆ ಪರಿಹಾರ ಒದಗಿಸಲು ಸಂಘಟಿತ ಪ್ರಯತ್ನ ನಡೆಯಬೇಕು. ಒಳ್ಳೆಯ ಕೆಲಸ, ಒಳ್ಳೆಯ ವಿಚಾರದಿಂದ ಸ್ಥಾಪನೆ ಆಗಿರುವ ಅರಿವು ಸಂಸ್ಥೆಗೆ ಎಲ್ಲ ರೀತಿಯ ಸಹಾಯ, ಸಹಕಾರ ನೀಡಲಾಗುವುದು ಎಂದರು.
ನಗರಸಭೆ ಸದಸ್ಯ ಪ್ರಶಾಂತ ದೊಡ್ಡಿ ಮಾತನಾಡಿ, ಸರ್ಕಾರ ಜನರ ಹಿತ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಅನೇಕ ಯೋಜನೆ ಜಾರಿಗೊಳಿಸಿದೆ. ಅವುಗಳ ಲಾಭ ಅರ್ಹರಿಗೆ ಆಗಬೇಕು. ಈ ದಿಸೆಯಲ್ಲಿ ಸಮಾಜದಲ್ಲಿರುವ ಸಂಘ-ಸಂಸ್ಥೆಗಳು ಜನಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಬೇಕು.ಇದರಿಂದ ಸಾಕಷ್ಟು ಬದಲಾವಣೆ ಕಾಣಲು ಸಾಧ್ಯ ಎಂದರು.
ಹಿರಿಯ ಪತ್ರಕರ್ತ ಸದಾನಂದ ಜೋಶಿ ಮಾತನಾಡಿ, ಸಂಘ-ಸಂಸ್ಥೆಗಳು ಹೆಚ್ಚೆಚ್ಚು ಸ್ಥಾಪನೆಯಾಗುವುದು ಒಳ್ಳೆಯದು. ಆದರೆ ಇವುಗಳ ಉದ್ದೇಶ ಸಮಾಜ ಸೇವೆ ಮಾತ್ರ ಆಗಿರಬೇಕು. ಮೂಲ ಉದ್ದೇಶದಿಂದ ವಿಮುಖವಾಗುವ ಸಂಸ್ಥೆಗಳು ಬಹುಬೇಗ ಸಮಾಜದಿಂದ ಮೂಲೆಗುಂಪಾಗುವುದು ಖಚಿತ. ಇಂದು ಸಮಾಘಾತುಕ ಶಕ್ತಿಗಳು ಸಮಾಜದಲ್ಲಿ ನಾನಾ ಸಮಸ್ಯೆ ಸೃಷ್ಟಿಸುತ್ತಿವೆ. ದೇಶ ವಿರೋಧಿ ಚಟುವಟಿಕೆಗಳಿಗೂ ಕುಮ್ಮಕ್ಕು ನೀಡುತ್ತಿವೆ. ಇಂತಹ ದೇಶ ವಿರೋಧಿ, ಸಮಾಜ ವಿರೋಧಿಗಳನ್ನು ಹುಡುಕಿ ಸದೆಬಡಿಯುವ ಬಗ್ಗೆ ಅರಿವು ಮೂಡಿಸುವುದು ಇಂದಿನ ಅತೀ ಜರೂರಿ ಕೆಲಸವಾಗಿದೆ ಎಂದು ಹೇಳಿದರು.
ಅರಿವು ಸೇವಾ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷರಾದ ವಿಶ್ವಕರ್ಮ ಸಂಘಟನೆ ಯುವ ಘಟಕದ ಜಿಲ್ಲಾ ಅಧ್ಯಕ್ಷ ಪ್ರಶಾಂತ ವಿಶ್ವಕರ್ಮ ಮಾತನಾಡಿ, ಸಮಗ್ರ ವಿಕಾಸಕ್ಕೆ ಪೂರಕವಾಗಿ ಮತ್ತು ಉತ್ತಮ ಸಮಾಜ ನಿರ್ಮಾಣದ ಕುರಿತು ವಿವಿಧ ಚಟುವಟಿಕೆ ನಿರಂತರ ನಡೆಸಲು ಸಂಸ್ಥೆ ಸ್ಥಾಪಿಸಲಾಗಿದೆ. ಎಲ್ಲರ ಸಹಾಯ, ಸಹಕಾರದಿಂದ ಸಂಸ್ಥೆಗೆ ಮಾದರಿಯಾಗಿ ಕಟ್ಟುವ ಸಂಕಲ್ಪ ಮಾಡಲಾಗಿದೆ ಎಂದರು.
ಸಂಸ್ಥೆ ಗೌರವಾಧ್ಯಕ್ಷರಾದ ಸಾಹಿತಿ ವಿನೋದಕುಮಾರ ಹೊನ್ನಾ ಪ್ರಾಸ್ತಾವಿಕ ಮಾತನಾಡಿದರು. ಶಿಲ್ಪಾ ಮಜಗೆ ನಿರೂಪಣೆ ಮಾಡಿದರು. ಶಿವಾನಂದ ಗೋರ್ಟಾ ಸ್ವಾಗತಿಸಿದರು. ರಾಜು ಸ್ವಾಮಿ ವಂದಿಸಿದರು. ಸಂದೀಪ ಪಾಟೀಲ್, ಬಸವರಾಜ ಹೆಗ್ಗೆ, ಸಂಸ್ಥೆ ಪದಾಧಿಕಾರಿಗಳು, ಗಣ್ಯರು, ವಿಶ್ವಕರ್ಮ ಸಮಾಜ ಮುಖಂಡರು ಭಾಗವಹಿಸಿದ್ದರು.