ಬೀದರ್

ಅಭಿವೃದ್ಧಿ ಕೆಲಸಗಳನ್ನು ಚುರುಕುಗೊಳಿಸಿ: ಶಾಸಕ ಪ್ರಭು ಚವ್ಹಾಣ

ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕುಗಳಿಗೆ ಸಾಕಷ್ಟು ಅನುದಾನ ತಂದು ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಲಾಗಿದೆ. ಎಲ್ಲ ಕೆಲಸಗಳಿಗೆ‌ ವೇಗ ನೀಡಬೇಕೆಂದು ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಔರಾದ(ಬಿ) ತಾಲ್ಲೂಕು ಪಂಚಾಯತ ಕಛೇರಿ ಸಭಾಂಗಣದಲ್ಲಿ ಜುಲೈ 24ರಂದು ನಡೆದ ಕೆಡಿಪಿ ಸಭೆಯಲ್ಲಿ ಅಧ್ಯಕತೆ ವಹಿಸಿ ಅವರು ಮಾತನಾಡಿದರು.
ಗ್ರಾಮಗಳಿಗೆ ಭೇಟಿ‌‌ ನೀಡಿದ ವೇಳೆ ಹಲವೆಡೆ ಕಾಮಗಾರಿಗಳು ಅರ್ಧಕ್ಕೆ ನಿಲ್ಲಿಸಿರುವುದು ಕಂಡುಬಂದಿದೆ. ಮುಂಗನಾಳ ಗ್ರಾಮದಲ್ಲಿ ನಿರ್ಮಿಸಲಾಗಿರುವ ರಸ್ತೆಯು ಒಂದು ತಿಂಗಳಲ್ಲೇ ಕಿತ್ತು ಹೋಗುತ್ತಿದೆ. ಕೆಲಸ ಪೂರ್ಣ ಪ್ರಮಾಣದಲ್ಲಿ ಬೋಗಸ್ ಮಾಡಿರುವ ಬಗ್ಗೆ ಗ್ರಾಮಸ್ಥರೇ ದೂರು‌ ನೀಡಿದ್ದಾರೆ. ಈ ಕುರಿತಂತೆ ಲೋಕಾಯುಕ್ತಕ್ಕೆ ದೂರು ನೀಡಲಾಗುವುದೆಂದು ತಿಳಿಸಿದರು. ಕ್ಷೇತ್ರದ‌ ಅನೇಕ ಕಡೆಗಳಲ್ಲಿ ಕಾಮಗಾರಿಗಳ ಬಗ್ಗೆ ದೂರುಗಳಿವೆ. ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಬೇಕು. ಇಲ್ಲವಾದಲ್ಲಿ ಸಮಸ್ಯೆ‌‌ ಎದುರಿಸಬೇಕಾಗುತ್ತದೆ‌ ಎಂದು ಎಚ್ಚರಿಸಿದರು.
ತಾಲ್ಲೂಕಿನ ಸಾಕಷ್ಟು ಅಧಿಕಾರಿಗಳು ಬೀದರ ನಗರದಲ್ಲಿ‌ ವಾಸಿಸುತ್ತಿದ್ದಾರೆ. ಇದು ಸರಿಯಲ್ಲ. ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ತಾಲ್ಲೂಕು ಕೇಂದ್ರದಲ್ಲಿಯೇ ಇದ್ದು ಕೆಲಸ ಮಾಡಬೇಕು. ಕಛೇರಿ ವಾಹನಗಳನ್ನು ಸ್ವಂತಕ್ಕಾಗಿ ಬಳಕೆ ಮಾಡುತ್ತಿರುವ ಬಗ್ಗೆಯೂ ದೂರುಗಳು ಬರುತ್ತಿವೆ. ಇಂಥವುಗಳು ನಡೆಯಬಾರದು. ಕೆಲಸ ಮಾಡಲು ಇಷ್ಟವಿಲ್ಲದೇ
ಇದ್ದಲ್ಲಿ ತಾವಾಗಿಯೇ ವರ್ಗವಾಗಿ ಕ್ಷೇತ್ರ ಬಿಟ್ಟು ಹೋಗಬೇಕು. ಆದರೆ ಯಾವುದೇ ಕಾರಣಕ್ಕೂ ಜನತೆಗೆ ತೊಂದರೆ ಕೊಡಬೇಡಿ ಎಂದು ಖಡಕ್ಕಾಗಿ ಸೂಚಿಸಿದರು.
ಕ್ಷೇತ್ರದಲ್ಲಿ ಸಾಕಷ್ಟು ಕೆಲಸಗಳು ಪ್ರಗತಿಯಲ್ಲಿವೆ. ಎಲ್ಲವನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ಕೆಲವು ಇಲಾಖೆಗಳಲ್ಲಿ 2-3 ವರ್ಷದ‌ ಹಳೆಯ ಕಾಮಗಾರಿಗಳು ಬಾಕಿ ಉಳಿದಿವೆ.‌ ಕೆಲಸ‌ ಮಾಡದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಯಾವುದೇ ಕಾರಣಕ್ಕೂ ಅಭಿವೃದ್ಧಿ ಕೆಲಸಗಳು ಕುಂಠಿತವಾಗಬಾರದು ಎಂದು ತಿಳಿಸಿದರು.
ಕ್ಷೇತ್ರದಲ್ಲಿನ ಸಾಕಷ್ಟು ವೈದ್ಯರು ಮತ್ತು ಅಧಿಕಾರಿಗಳು ಬೇರೆ ಕಡೆ ನಿಯೋಜನೆ ಆಧಾರದ ಮೇಲೆ ಹೋಗಿದ್ದಾರೆ‌. ಇವರೆಲ್ಲರ‌ ನಿಯೋಜನೆಯನ್ನು ರದ್ದುಪಡಿಸಿ ಕ್ಷೇತ್ರದಲ್ಲಿ ಕೆಲಸ ಮಾಡುವಂತೆ ಕ್ರಮ ವಹಿಸಬೇಕೆಂದು ಅಧಿಕಾರಿಗಳಿಗೆ‌‌ ಸೂಚನೆ ನೀಡಿದರು.
ಶಾಸಕನಾದ ನಂತರ ಇಲ್ಲಿವರೆಗೆ ಯಾವುದೇ ಅಧಿಕಾರಿಯ ವಿರುದ್ಧ ಹಕ್ಕುಚ್ಯುತಿ ಮಂಡಿಸಿಲ್ಲ. ಎಲ್ಲ ಅಧಿಕಾರಿಗಳನ್ನು ಕುಟುಂಬದ ಸದಸ್ಯರಂತೆ ಕಂಡಿದ್ದೇನೆ. ಆದರೆ ಕೆಲವರು ಕೆಡಿಪಿ ಸಭೆಗೆ ಸರಿಯಾದ ಮಾಹಿತಿ ಸಲ್ಲಿಸದೇ ಕರ್ತವ್ಯಲೋಪ ಎಸಗುತ್ತಿದ್ದಾರೆ. ಇನ್ನುಮುಂದೆ ಸುಮ್ಮನಿರುವುದಿಲ್ಲ. ಇಂಥವರ ವಿರುದ್ಧ ಹಕ್ಕುಚ್ಯುತಿ ಮಂಡಿಸಲು ಹಿಂಜರಿಯುವುದಿಲ್ಲ ಎಂದು ಎಚ್ಚರಿಸಿದರು.
ಔರಾದ(ಬಿ) ಮತ್ತು ಕಮಲನಗರ ತಾಲ್ಲೂಕಿನಲ್ಲಿರುವ ಎಲ್ಲ ಕಛೇರಿಗಳಲ್ಲಿ ಸಮಯ ಪಾಲನೆಯಾಗಬೇಕು. ಕೆಲಸದ ಅವಧಿಯಲ್ಲಿ ಮೊಬೈಲ್ ಫೋನ್  ಚಾಲ್ತಿಯಲ್ಲಿಟ್ಟುಕೊಂಡು ಸಾರ್ವಜನಿಕರ ಕರೆಗಳಿಗೆ ಸರಿಯಾಗಿ ಸ್ಪಂದಿಸಬೇಕು. ಯಾವುದೇ ಕಾರಣಕ್ಕೂ ಜನತೆಗೆ ತೊಂದರೆಯುಂಟು ಮಾಡಬಾರದು ಎಂದು ಹೇಳಿದರು.
ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿದ ವೇಳೆ ಸಾಕಷ್ಟು ಸಮಸ್ಯೆಗಳು ಕಾಣಿಸಿವೆ. ಸಣ್ಣ-ಪುಟ್ಟ ಸಮಸ್ಯೆಗಳಿಗೂ ಜಿಲ್ಲಾಸ್ಪತ್ರೆಗೆ ಕಳುಹಿಸುವುದು, ಔಷಧಕ್ಕಾಗಿ ಹೊರಗಡೆ ಕಳುಹಿಸುವುದು ಇಂದಿಗೂ ನಡೆಯುತ್ತಿದೆ. ಇದು ಸುಧಾರಿಸಬೇಕು. ವೈದ್ಯರು ಮತ್ತು ಸಿಬ್ಬಂದಿ‌‌ ಅವರಿಗಾಗಿ
ಇರುವ ವಸತಿ ಗೃಹಗಳಲ್ಲಿಯೇ ವಾಸಿಸಬೇಕು. ಕೆಲವು ವೈದ್ಯರು ಕರ್ತವ್ಯದ ಅವಧಿಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.ಇದರ‌ ಬಗ್ಗೆ ನಿಗಾ ವಹಿಸಬೇಕು‌‌ ಎಂದು ತಿಳಿಸಿದ ಶಾಸಕರು, ತಾಲ್ಲೂಕು ಆಸ್ಪತ್ರೆಯಲ್ಲಿ ಬ್ಲಡ್ ಬ್ಯಾಂಕ್ ನಿರ್ಮಿಸಲು ಕ್ರಮ ವಹಿಸಬೇಕು. ತಾಲ್ಲೂಕು ಆಸ್ಪತ್ರೆಯಲ್ಲಿ ಏನೇನು ಅವಶ್ಯಕತೆಯಿದೆ‌ ಎನ್ನುವ ಬೇಡಿಕೆಗಳ ಪಟ್ಟಿಯನ್ನು ಸಿದ್ದಪಡಿಸಿಕೊಟ್ಟಲ್ಲಿ ಅವಶ್ಯಕ‌ ಅನುದಾನ ಕಲ್ಪಿಸಲಾಗುವುದು‌ ಎಂದು ತಾಲ್ಲೂಕು ಆರೋಗ್ಯಾಧಿಕಾರಿಗೆ ಸೂಚಿಸಿದರು.
ಕೆಲಸ ಮಾಡದ ಶಿಕ್ಷಕರನ್ನು ವಜಾ ಮಾಡಿ: ಕ್ಷೇತ್ರದ ಹಲವೆಡೆ ಶಿಕ್ಷಕರು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇದರಿಂದ ಫಲಿತಾಂಶ ಸುಧಾರಣೆಗೆ ಸಮಸ್ಯೆಯಾಗುತ್ತಿದೆ. ಪಾಲಕರು ತಮ್ಮ ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಮಾಡಿಸಲು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಸರಿಯಾಗಿ ಕೆಲಸ ಮಾಡದ‌‌ ಶಿಕ್ಷಕರನ್ನು ಮುಲಾಜಿಲ್ಲದೇ ವಜಾ ಮಾಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗೆ ಸೂಚಿಸಿದರು.
ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನ ಬರುತ್ತದೆ. ಆದರೆ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಕುಂಠಿತಗೊಳ್ಳುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು. ಅತ್ಯಲ್ಪ ವಿದ್ಯಾರ್ಥಿಗಳಿರುವ   ಕಡೆಗಳಲ್ಲಿ ಸಾಕಷ್ಟು ಶಿಕ್ಷಕರಿದ್ದಾರೆ. ಕೆಲವೆಡೆ ವಿದ್ಯಾರ್ಥಿಗಳು ಹೆಚ್ಚಿದ್ದರೂ ಶಿಕ್ಷಕರ ಕೊರತೆಯಿದೆ‌.  ಇವುಗಳೆಲ್ಲವನ್ನೂ ಸರಿಪಡಿಸಿ ಕ್ಷೇತ್ರದಲ್ಲಿ ಶಿಕ್ಷಣದ ಏಳಿಗೆಗೆ ಶ್ರಮಿಸಬೇಕೆಂದು‌ ಕ್ಷೇತ್ರ ಶಿಕ್ಷಣಾಧಿಕಾರಿಗೆ ನಿರ್ದೇಶನ ನೀಡಿದರು.
ರೈತ ಸಂಪರ್ಕ ಕೇಂದ್ರಗಳ ಸಮಸ್ಯೆ ಸರಿಪಡಿಸಿ: ರೈತರ ಅನುಕೂಲಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಸಾಕಷ್ಟು ಯೋಜನೆಗಳಿವೆ. ಎಲ್ಲ ಯೋಜನೆಗಳ ಬಗ್ಗೆ ರೈತರಲ್ಲಿ ಅರಿವು ಮೂಡಿಸಬೇಕು. ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುವ ಗ್ರಾಮ ಸೇವಕರು ರೈತರೊಂದಿಗೆ ಸರಿಯಾಗಿ ವ್ಯವಹರಿಸುವುದಿಲ್ಲ ಎನ್ನುವ ದೂರುಗಳಿವೆ. ರೈತ ಸಂಪರ್ಕ ಕೇಂದ್ರದಲ್ಲಿಯೂ ರೈತರಿಗೆ ವಿನಾ ಕಾರಣ ಪೀಡಿಸಲಾಗುತ್ತಿದೆ.‌ ಇಂತಹ ಸಮಸ್ಯೆಗಳನ್ನು ಸರಿಪಡಿಸಿ ರೈತರಿಗೆ ಸರ್ಕಾರದ ಸೌಲಭ್ಯಗಳು ಸಮರ್ಪಕವಾಗಿ ಕಲ್ಪಿಸಲು ಪ್ರಯತ್ನಿಸಬೇಕೆಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಸೂಚಿಸಿದರು.
ಸಭೆಯಲ್ಲಿ ಲೋಕೋಪಯೋಗಿ ಇಲಾಖೆ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ, ಗ್ರಾಮೀಣ ಕುಡಿಯುವ ನೀರು, ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ತೋಟಗಾರಿಕೆ, ಜೆಸ್ಕಾಂ, ಕಂದಾಯ ಇಲಾಖೆ, ಅಬಕಾರಿ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಡಿಆರ್ ಡಿಎ ಯೋಜನಾ ನಿರ್ದೇಶಕರು ಹಾಗೂ ಔರಾದ ತಾಪಂ ಆಡಳಿತಾಧಿಕಾರಿ ಜಗನ್ನಾಥ ಮೂರ್ತಿ, ಔರಾದ(ಬಿ) ಹಾಗೂ ಕಮಲನಗರ ತಹಸೀಲ್ದಾರರಾದ ಬೀರೇಂದ್ರ ಸಿಂಗ್ ಠಾಕೂರ್, ಶಿವಕುಮಾರ ಘಾಟೆ,  ತಹಸೀಲ್ದಾರರಾದ ಮಲ್ಲಿಕಾರ್ಜುನ, ನಾಗರಾಜ ನಾಯಕ್ ಸೇರಿದಂತೆ ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
Ghantepatrike kannada daily news Paper

Leave a Reply

error: Content is protected !!