ಬೀದರ್

ಅಧಿಕಾರಿಗಳಿಗೆ ಶಾಸಕ ಪ್ರಭು ಚವ್ಹಾಣ ತರಾಟೆ

ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಡೆಂಗ್ಯೂ ಜ್ವರ ನಿಯಂತ್ರಣ ಕುರಿತಂತೆ ಜುಲೈ 11ರಂದು ಆರೋಗ್ಯ ಇಲಾಖೆ ಕಛೇರಿಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಸೇರಿದಂತೆ ಎಲ್ಲ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಸ್ವಚ್ಛತೆಯ ಕುರಿತಾಗಿ ಅಧಿಕಾರಿಗಳಿಗೆ ತೀವ್ರ ತರಾಟೆಗೆ ತೆಗೆದುಕೊಂಡರು.
ಡೆಂಗ್ಯೂ ರೋಗ ದಿನೇ ದಿನೇ ಹೆಚ್ಚಾಗುತ್ತಿದೆ. ಆದರೆ ಎಲ್ಲಿಯೂ ಸ್ವಚ್ಛತೆ ಕಾಣಿಸುತ್ತಿಲ್ಲ. ಎಲ್ಲ ಗ್ರಾಮಗಳಲ್ಲಿ ಚರಂಡಿಗಳು ತುಂಬಿವೆ. ಎಲ್ಲೆಂದರಲ್ಲಿ ನೀರು ನಿಂತಿರುವುದು ಕಾಣಿಸುತ್ತಿದೆ. ಹೀಗಾದರೆ ಡೆಂಗ್ಯೂ ನಿಯಂತ್ರಣ ಹೇಗೆ ಸಾಧ್ಯ ? ಔರಾದ(ಬಿ) ಪಟ್ಟಣ ಒಳಗೊಂಡು ಎಲ್ಲ ಗ್ರಾಮಗಳಲ್ಲಿ ಒಂದು ವಾರದೊಳಗಾಗಿ ಸ್ವಚ್ಛತೆಯ ಕೆಲಸವಾಗಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಡೆಂಗ್ಯೂ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆಯ ಜೊತೆಗೆ ಎಲ್ಲ ಇಲಾಖೆಗಳ ಅಧಿಕಾರಿಗಳು ಸಮನ್ವಯತೆಯೊಂದಿಗೆ ಕೆಲಸ ಮಾಡಬೇಕು. ರೋಗ ಲಕ್ಷಣಗಳ ಕಾಣಿಸಿದಲ್ಲಿ ತಕ್ಷಣ ತಪಾಸಣೆಗೆ ಒಳಪಡಿಸಿ ಚಿಕಿತ್ಸೆ ನೀಡಬೇಕು. ಡೆಂಗ್ಯೂ ಜ್ವರದ ಲಕ್ಷಣಗಳು, ತಪಾಸಣೆ, ಚಿಕಿತ್ಸೆಯ ಕುರಿತು ಜನರಲ್ಲಿ ತಿಳುವಳಿಕೆ ಮೂಡಿಸಿದಲ್ಲಿ ರೋಗ ಬಾರದಂತೆ ತಡೆಯಬಹುದು. ಹಾಗಾಗಿ ಜಾಗೃತಿ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ಕೊಡಬೇಕು. ವಿಶೇಷವಾಗಿ ಗ್ರಾಮೀಣ ಭಾಗದಲ್ಲಿರುವ ವೈದ್ಯರು ಮತ್ತು ಸಿಬ್ಬಂದಿ ಸರಿಯಾಗಿ ಕೆಲಸ ಮಾಡಬೇಕು. ಮನೆ-ಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸಬೇಕು. ಕೆಲವೆಡೆ ಆಶಾ ಕಾರ್ಯಕರ್ತೆಯರು ಸರಿಯಾಗಿ ಕೆಲಸ ಮಾಡುತ್ತಿಲ್ಲವೆಂಬ ದೂರುಗಳಿವೆ. ಇವುಗಳನ್ನು ಸರಿಪಡಿಸಬೇಕೆಂದು ಹೇಳಿದರು .
ಎಲ್ಲ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಒಂದೊಂದಾಗಿ ಮಾಹಿತಿ ಪಡೆದ ಶಾಸಕರು, ಎಲ್ಲ ವೈದ್ಯರು ಸರಿಯಾಗಿ ಕೆಲಸ ಮಾಡಬೇಕು. ಆಸ್ಪತ್ರೆಗೆ ಬರುವ ರೋಗಿಗಳೊಂದಿಗೆ ಸರಿಯಾಗಿ ವ್ಯವಹರಿಸಬೇಕು. ಔಷಧಕ್ಕಾಗಿ ಹೊರಗಡೆ ಚೀಟಿ ಬರೆಯುವುದು, ಸಣ್ಣ ಸಮಸ್ಯೆಗೂ ಜಿಲ್ಲಾ ಕೇಂದ್ರಕ್ಕೆ ಶಿಫಾರಸ್ಸು ಮಾಡುವುದು ನಿಲ್ಲಿಸಬೇಕು. ರೋಗಿಗಳಿಗೆ ಯಾವುದೇ ರೀತಿಯ ಸಮಸ್ಯೆಗಳಾಗದಂತೆ ಕೆಲಸ ಮಾಡಬೇಕೆಂದು ಹೇಳಿದರು.
ಸ್ವಚ್ಛತೆಯ ಕೊರತೆಯಿಂದಾಗಿ ಸೊಳ್ಳೆಗಳು ಹೆಚ್ಚಾಗಿ ಡೆಂಗ್ಯೂ ಸೇರಿ ಚಿಕುನಗುನ್ಯಾ, ಮಲೇರಿಯಾದಂತಹ ಹಲವಾರು ರೋಗಗಳು ಹರಡುತ್ತವೆ. ಹಾಗಾಗಿ ಎಲ್ಲ ಗ್ರಾಮಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಮಹತ್ವ ಕೊಡಬೇಕು. ಎಲ್ಲಿಯೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಚರಂಡಿಗಳನ್ನು ಸ್ವಚ್ಛಗೊಳಿಸಿ, ಬ್ಲೀಚಿಂಗ್ ಪೌಡರ್ ಹಾಕಬೇಕು. ಎಲ್ಲ ಕಡೆಗಳಲ್ಲಿ ಫಾಗಿಂಗ್ ಮಾಡಿಸಬೇಕು ಎಂದು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದರು.
ಡೆಂಗ್ಯೂ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಹಾಗಾಗಿ ಪಿಡಿಓಗಳು ಕಡ್ಡಾಯವಾಗಿ ಕೇಂದ್ರಸ್ಥಾನದಲ್ಲಿದ್ದು, ಕೆಲಸ ಮಾಡಬೇಕು. ತಮ್ಮ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಹರಿಸಬೇಕು. ಆರೋಗ್ಯ ಇಲಾಖೆಯ ಸಂಪರ್ಕದಲ್ಲಿದ್ದು, ಗ್ರಾಮ ಪಂಚಾಯಿತಿಯಿಂದ ಮಾಡಬಹುದಾದ ಎಲ್ಲ ರೀತಿಯ ಸಹಕಾರ ಒದಗಿಸಬೇಕೆಂದು ಸೂಚಿಸಿದರು.
ತಾಲ್ಲೂಕು ವೈದ್ಯಾಧಿಕಾರಿ ಡಾ.ಗಾಯತ್ರಿ ಅವರು ಮಾತನಾಡಿ, ಡೆಂಗ್ಯೂ ಜ್ವರದ ಲಕ್ಷಣಗಳು, ನಿಯಂತ್ರಣ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಔರಾದ(ಬಿ) ಹಾಗ ಕಮಲನಗರ ತಾಲ್ಲೂಕು ಕೇಂದ್ರಗಳಿಗೆ ರೋಗ ಪತ್ತೆಗೆ ವ್ಯವಸ್ಥೆ ಮಾಡಲಾಗಿದೆ. ರೋಗ ಲಕ್ಷಣಗಳು ಕಾಣಿಸಿದಲ್ಲಿ ತಕ್ಷಣ ತಪಾಸಣೆ ಮಾಡುವ ಕೆಲಸ ನಡೆದಿದೆ. ಈವರೆಗೆ 22 ಜನರಲ್ಲಿ ರೋಗ ಲಕ್ಷಣಗಳು ಕಾಣಿಸಿದ್ದು, ಇಬ್ಬರಲ್ಲಿ ಡೆಂಗ್ಯೂ ಪತ್ತೆಯಾಗಿದೆ. ಚಿಕಿತ್ಸೆ ನಡೆಯುತ್ತಿದೆ. ರೋಗ ನಿಯಂತ್ರಣಕ್ಕೆ ಇಲಾಖೆಯಿಂದ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ ಶಾಸಕರು ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕಿನ ಎಲ್ಲ ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಡೆಂಗ್ಯೂ ನಿಯಂತ್ರಣಕ್ಕಾಗಿ ಮಾಡಿಕೊಂಡಿರುವ ತಯಾರಿಗಳ ಬಗ್ಗೆ ವಿವರಣೆ ಪಡೆದುಕೊಂಡರು. ಆರೋಗ್ಯಕ್ಕಾಗಿ ಹೆಚ್ಚಿನ ಮಹತ್ವ ನೀಡಿದ್ದು, ಆಸ್ಪತ್ರೆಗಳ ನಿರ್ಮಾಣ, ಉಪಕರಣಗಳನ್ನು ಒದಗಿಸುವುದು ಸೇರಿದಂತೆ ಆರೋಗ್ಯ ಇಲಾಖೆಯ ಯಾವುದೇ ಕೆಲಸವಿರಲಿ ಮೊದಲ ಆದ್ಯತೆಯಾಗಿ ಕೆಲಸ ಮಾಡುತ್ತೇನೆ. ಆದರೆ ವೈದ್ಯರು ಸರಿಯಾಗಿ ಕೆಲಸ ಮಾಡಬೇಕು ಎಂದು ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರರಾದ ಮಲಶೆಟ್ಟಿ ಚಿದ್ರೆ, ಅಮಿತಕುಮಾರ ಕುಲಕರ್ಣಿ, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಬೀರೇಂದ್ರಸಿಂಗ್ ಠಾಕೂರ್, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸ್ವಾಮಿದಾಸ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸುಭಾಷ, ಕಮಲನಗರ ತಾಪಂ ಸಹಾಯಕ ನಿರ್ದಶಕ ಶಿವಕುಮಾರ ಘಾಟೆ ಸೇರಿದಂತೆ ವಿವಿಧ ಆಸ್ಪತ್ರೆಗಳ ವೈದ್ಯಾಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.

Ghantepatrike kannada daily news Paper

Leave a Reply

error: Content is protected !!