ಅತಿಥಿ ಶಿಕ್ಷಕರನ್ನು ಸೇವೆಯಲ್ಲಿ ಮುಂದುವರೆಸಿ : ಸಂಗಮೇಶ ಚಿದ್ರೆ
ಬೀದರ: ಅತಿಥಿ ಶಿಕ್ಷಕರನ್ನು ಸೇವೆಯಲ್ಲಿ ಮುಂದುವರೆಸಿ ಎಂದು ಮಾನ್ಯ ಹೈಕೋರ್ಟ್ (21-02-2024ರಂದು ನೀಡಿದ) ಆದೇಶವಿದ್ದರೂ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾಂಶುಪಾಲರು ಕೋರ್ಟ್ ಆದೇಶ ಉಲ್ಲಂಘನೆ ಮಾಡಿ ಅತಿಥಿ ಶಿಕ್ಷಕರನ್ನು ಸೇವೆಯಲ್ಲಿ ಮುಂದುವರೆಸದೆ ಮಲತಾಯಿ ಧೋರಣೆ ತೋರುತ್ತಿದ್ದಾರೆ ಎಂದು ಹೈದರಾಬಾದ ಕರ್ನಾಟಕ (ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ)ದ ರಾಜ್ಯಾಧ್ಯಕ್ಷ ಸಂಗಮೇಶ ಚಿದ್ರೆ ಗಂಭೀರ ಆರೋಪ ಮಾಡಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಹೈದರಬಾದ ಕರ್ನಾಟಕ (ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ಕರೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಜಿಲ್ಲೆಯ ವಿವಿಧ ವಸತಿ ಶಾಲೆಗಳಲ್ಲಿ ಹೊಸ ನೇಮಕಾತಿ ಆಗೋವರೆಗೆ ಅತಿಥಿ ಶಿಕ್ಷಕರನ್ನು ಯಾವುದೇ ರೀತಿಯ ಅಡೆತಡೆ ಉಂಟುಮಾಡದೆ ಅವರನ್ನು ಸೇವೆಯಲ್ಲಿ ಯಥಾವತ್ತಾಗಿ ಮುಂದುವರೆಸಿ ಎಂದು ಅಂತೀಮ ತೀರ್ಪು ಮಾನ್ಯ ಹೈಕೋರ್ಟ್ ನೀಡಿದೆ. ಆದರೆ ತೀರ್ಪಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡದ ವಸತಿ ಶಾಲೆಗಳ ಪ್ರಾಚಾರ್ಯರು ಕೋರ್ಟ್ ಆದೇಶಕ್ಕೂ ನಮಗೂ ಸಂಬಂಧವಿಲ್ಲ ಎಂದು ಉಡಾಫೆ ಉತ್ತರ ನೀಡುತ್ತಿದ್ದಾರೆ. ಬಹುಶಃ ಪ್ರಾಚಾರ್ಯರಿಗೆ ಮಾಹಿತಿಯ ಕೊರತೆ ಇದ್ದುದೇ ನಾವು ಶಾಲೆಯಿಂದ ಹೊರಗುಳಿಯುವಂತೆ ಮಾಡಿದೆ. ನಮಗೆ ಸೇವೆಯಲ್ಲಿ ಮುಂದುವರೆಸಿ ಇಲ್ಲ ದಯಾಮರಣ ಪಾಲಿಸಿ ಎಂದು ಚಿದ್ರೆ ನೋವು ತೋಡಿಕೊಂಡರು.
ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಅತಿಥಿ ಶಿಕ್ಷಕ ಸತೀಶ ಸಜ್ಜನಶೆಟ್ಟಿ ಮಾತನಾಡಿ ನಾವು ವಸತಿ ಶಾಲೆಗಳಲ್ಲಿ ಸುಮಾರು 10 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇವೆ. ನಮಗೆ ಯಾವುದೇ ಆರೋಗ್ಯ ಸೇವೆ, ಪಿಎಫ್ ಸೇವೆ ಮತ್ತು ಇನ್ನಿತರ ರಕ್ಷಣೆ ಇಲ್ಲ. ಆದರೂ ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ನಿರಂತರವಾಗಿ ದುಡಿಯುತ್ತೇವೆ. ಸಮಾನ ಕೆಲಸಕ್ಕೆ ಸಮಾನ ವೇತನ ನೀಡುತ್ತಿಲ್ಲ. ಹಾಗಾದರೆ ನಾವು ಈಗ ಎಲ್ಲಿ ಹೋಗಬೇಕು? ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ಹೇಳಿದಂತೆ ಅತಿಥಿ ಶಿಕ್ಷಕರನ್ನು ಖಾಯಂಗೊಳಿಸಬೇಕು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸೇವಾ ಭದ್ರತೆ, ಪಿ.ಎಫ್ ಹಾಗೂ ವೈದ್ಯಕೀಯ ಸೇವೆ, ಕನಿಷ್ಠ ವೇತನ 33 ಸಾವಿರ ರೂ. ನೀಡುವುದು, ವರ್ಷದ 12 ತಿಂಗಳು ಸೇವೆಗೆ ಪರಿಗಣಿಸಬೇಕು. ಮುಂದಿನ ನೇಮಕಾತಿಯಲ್ಲಿ ಸೇವಾಧಾರದ ಮೇಲೆ ನಮಗೆ ಪ್ರಥಮ ಆದ್ಯತೆ ನೀಡಬೇಕು. 371ಜೆ ಅಡಿಯ ವಿಶೇಷ ಸೌಲಭ್ಯ ಅಡಿಯಲ್ಲಿ ವಯೋಮಾನ ಆಧಾರದ ಮೇಲೆ ಖಾಯಂಗೊಳಿಸಬೇಕು. ಸಂಬಳ ಸಹಿತ ಮಾತೃತ್ವ ರಜೆಯನ್ನು ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ಅತಿಥಿ ಶಿಕ್ಷಕರು ತಿಳಿಸಿದರು.
ಇದೇ ವೇಳೆ ಸುದ್ದಿಗೋಷ್ಠಿಯಲ್ಲಿ ಜಿಲ್ಲೆಯ ವಿವಿಧ ವಸತಿ ಶಾಲೆತಗಳ ಅತಿಥಿ ಶಿಕ್ಷಕರಾದ ಜಗದೀಶ ಕರುಣಾಶೀಲ, ಅಮರ ಪಾಲ್, ಸಂತೋಷ ವಗ್ಗೆ, ಮಹೇಶ ವಾರದ್, ಗುರುನಾಥ ಕೋಟೆ, ಸುರೇಖಾ ಖಾನಾಪುರೆ, ರಮೇಶ ಸೂರ್ಯವಂಶಿ, ರವಿ ಅಲ್ಮಾಜಿ, ಜೈಪಾಲರೆಡ್ಡಿ, ಸಂತೋಷಕುಮಾರ, ಸಂಜುಕುಮಾರ ಮೇತ್ರೆ, ಮಧುಸೂಧನ ಶಂಕರ, ದಿಲೀಪ ಚಂದಾ, ಪ್ರಿಯಾ ಸಂಜೀವಕುಮಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.